ಚುನಾವಣಾ ಪೂರ್ವ ಭರವಸೆಗಳಿಗೆ ವಿರುದ್ಧವಾಗಿ, ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ಹಣ ಬಿಡುಗಡೆ ಕುರಿತು ಸರ್ಕಾರ ಹಿಂದೇಟು ಹಾಕಿದೆ. ಡಿಕೆ ಶಿವಕುಮಾರ್, ಸರ್ಕಾರದ ಆದಾಯ ಹಾಗೂ ತೆರಿಗೆ ಸಂಗ್ರಹದ ಮೇಲೆ ಹಣ ಬಿಡುಗಡೆ ಅವಲಂಬಿತ ಎಂದಿದ್ದಾರೆ. ಚುನಾವಣಾ ವೇಳೆ ನೀಡಿದ ಭರವಸೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಬಳ್ಳಾರಿ (ಮೇ.19): ಚುನಾವಣೆಗೂ ಮುನ್ನ ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್‌ ನಿಂಗೂ ಫ್ರೀ ಎಂದಿದ್ದ ಸಿದ್ದರಾಮಯ್ಯ, ಸಿಎಂ ಆಗುತ್ತಿದ್ದ ಹಾಗೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದರು. ಈಗ ಗೃಹಲಕ್ಷ್ಮೀ ವಿಚಾರದಲ್ಲೂ ಸರ್ಕಾರ ಉಲ್ಟಾ ಹೊಡೆಯುವುದು ಪಕ್ಕಾ ಆಗಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಸಮಯದಲ್ಲಿಯೇ ಗೃಹಲಕ್ಷ್ಮಿಯರಿಗೆ (Gruhalakshmi Payment) ಡಿಕೆ ಶಿವಕುಮಾರ್‌ ಬಾಂಬ್‌ ಎಸೆದಿದ್ದಾರೆ.

ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಡಿಕೆ ಶಿವಕುಮಾರ್‌ಗೆ (DK Shivakumar) ಗೃಹಲಕ್ಷ್ಮೀ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಡಿಸಿಎಂ, 'ನೋಡ್ರೀ ನಾವು ತಿಂಗಳು ತಿಂಗಳು ಕೊಡ್ತಿವೀ ಅಂತಾ ಎಲ್ಲೂ ಹೇಳಿಲ್ಲ. ಸರ್ಕಾರದ ದುಡ್ಡು ಬರ್ತಾ ಇರಬೇಕು. ನೀವು ಟ್ಯಾಕ್ಸ್‌ ಕಟ್ಟೋದು ಕಟ್ತಾ ಇರಬೇಕು. ನಾವು ಅದನ್ನು ಕೊಡ್ತಾ ಇರಬೇಕು. ಈಗ ಯಾರೋ ಕಾಂಟ್ರಾಕ್ಟ್‌ ಮಾಡ್ತಾ ಇರ್ತಾರೆ ಎಂದಿಟ್ಟುಕೊಳ್ಳಿ. ಅವನು ಕೆಲಸ ಮಾಡಿದ ಮಾರನೇ ದಿನವೇ ಹಣ ಬರುತ್ತಾ?, 2 ವರ್ಷ, 1 ವರ್ಷ, 3 ವರ್ಷ, 4 ವರ್ಷ, 5 ವರ್ಷ ಇವೆಲ್ಲಾ ಆಗ್ತಾ ಇರುತ್ತದೆ' ಎಂದು ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ನೀವು ಹೀಗೆ ಹೇಳಿಯೇ ಇರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.

ಮಳೆ ಬರಬೇಕು, ಮಳೆ ಬಂದರೆ ಒಳ್ಳೆಯದಾಗುತ್ತದೆ

ಇದೇ ವೇಳೆ ಬೆಂಗಳೂರಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್‌, ಮಳೆ ಬರಬೇಕು ಎಂದು ಭಗವಂತನಲ್ಲಿ ಬೇಡಿಕೊಳ್ಳುವೆ. ಮಳೆ ಬಂದರೆ ರೈತರಿಗೆ ಒಳ್ಳೆಯಾದಾಗುತ್ತದೆ.ಜಲಾಶಯಗಳು ತುಂಬುತ್ತದೆ. ನಾನು ಪವರ್ ಮಿನಿಸ್ಟರ್ ಅಗಿದ್ದವನು ಮಳೆ ಬರದೇ ಇದಲ್ಲಿ ಏನೆಲ್ಲಾ ಸಮಸ್ಯೆ ಆಗುತ್ತದೆ ಅನ್ನೋದು ನನಗೆ ಗೊತ್ತು. ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿದೆ ಯಾವುದೇ ದೊಡ್ಡ ಸಮಸ್ಯೆಯಾಗಿಲ್ಲ. ಒಂದು ಡೆತ್ ಆಗಿರುವ ಬಗ್ಗೆ ಮಾಹಿತಿ ಇದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ಕೆಲವಡೆ ಮನೆ ಕೆಳಗೆ ಇದ್ದವು. ನೀರು ತುಂಬಿದೆ. ಯುದ್ಧಸ್ಥಿತಿಯಲ್ಲಿ ನಮ್ಮ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ' ಎಂದು ಹೇಳಿದರು. ನಾನು ಈಗ ವಾಪಸ್ಸು ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ. ಕೆಲವು ಕಡೆ ವಿಸಿಟ್ ಮಾಡುವ ಪ್ಲ್ಯಾನ್‌ ಇದೆ ಎಂದಿದ್ದಾರೆ.

ಕಾಂಗ್ರೆಸ್‌ ಇಡೀ ದೇಶದಲ್ಲಿಯೇ ಟ್ರೆಂಡ್‌ ಸೆಟ್ಟರ್‌ ಪಕ್ಷ

ವಿರೋಧ ಪಕ್ಷದವರ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, 'ನಾನೇನು ಟೂರ್ ಮಾಡೋಕೆ ಬಂದಿದ್ದೀನಾ? ಕುಮಾರಸ್ವಾಮಿ, ಅಶೋಕ ಟೀಕೆ ಮಾಡದೇ ಇದ್ದರೆ, ಅವರಿಗೆ ಇರೋಕೆ ಆಗುತ್ತಾ? ನಾಲ್ಕು ದಿನ ಮುಂಚೆಯೇ ಮಳೆ ಬಗ್ಗೆ ಮಾಹಿತಿ ಇತ್ತು. ಪರ್ಮನೆಂಟ್‌ ಸೆಲ್ಯೂಷನ್ ಮಾಡಲು ಪ್ರಯತ್ನ ಮಾಡ್ತಿದ್ದೇವೆ. ಇದಕ್ಕಾಗಿ ರೂಪುರೇಷೆ ಮಾಡಲು ಯತ್ನ ಮಾಡ್ತಿದ್ದೇವೆ. ಶ್ರೀರಾಮುಲು, ಅಶೋಕ ಅವರ ಆಶಯದಂತೆ ಆಗಲಿ (ಗ್ರೇಟರ್ ಬೆಂಗಳೂರು ಮಾಡಿ ರಿಯಲ್ ಎಸ್ಟೇಟ್ ಮಾಫಿಯಾ ಮಾಡ್ತಿದ್ದಾರೆ ಎಂದು ಟೀಕೆ ಮಾಡಿದ್ದರು.). ನಮ್ಮದು ಕಾಂಗ್ರೆಸ್ ಗ್ಯಾರಂಟಿ ಬಿಜೆಪಿಯದ್ದು, ಬಿಜೆಪಿ ಗ್ಯಾರಂಟಿ ಅಲ್ಲ ಮೋದಿ ಗ್ಯಾರಂಟಿ ಎಂದು ಟೀಕಿಸಿದ್ದಾರೆ.

ನಮ್ಮ ಗ್ಯಾರಂಟಿಯೇ ಬಿಜೆಪಿ ಸರ್ಕಾರದಲ್ಲಿ ಅನುಕರಣೆ ಮಾಡ್ತಿದ್ದಾರೆ.ನರೇಗಾ ಮಾಡಿದ್ರು, ಅದನ್ನು ತೆಗೆಯೋಕೆ ಆಗುತ್ತಾ? ಉಳುವವನೆ ಭೂ ಒಡೆಯ ತೆಗೆಯೋಕೆ ಆಯ್ತಾ? ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತವೆ. ಕಾಂಗ್ರೆಸ್ ಪಾರ್ಟಿಯೇ ದೇಶದಲ್ಲಿ ಟ್ರೆಂಡ್‌ ಸೆಟ್ಟರ್‌ ಎಂದಿದ್ದಾರೆ.