ದೆಹಲಿಯಲ್ಲಿ ವರ-ವಧುವಿಲ್ಲದೆ ನಕಲಿ ಮದುವೆಗಳು ಜನಪ್ರಿಯವಾಗುತ್ತಿವೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಗೀತ, ನೃತ್ಯ, ಊಟದೊಂದಿಗೆ ನಿಜವಾದ ಮದುವೆಯಂತೆ ಆಚರಿಸಲಾಗುತ್ತದೆ. ಟಿಕೆಟ್‌ ಖರೀದಿಸಿ ಭಾಗವಹಿಸಬಹುದು. ಪ್ರಚಾರ, ಸಾಂಸ್ಕೃತಿಕ ಆಚರಣೆ ಹಾಗೂ ಸಾಮಾಜಿಕ ಒಡನಾಟಕ್ಕಾಗಿ ಇವುಗಳನ್ನು ಆಯೋಜಿಸಲಾಗುತ್ತದೆ.

ಭಾರತದಂತಹ ಸಮಾಜದಲ್ಲಿ, ಮದುವೆಗಳು, ಅದ್ದೂರಿ ಶಾಸ್ತ್ರಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈಗ, ದೆಹಲಿಯ ಜನಪ್ರಿಯ ಪಾರ್ಟಿ ದೃಶ್ಯವು ಹೊಸ ಟ್ರೆಂಡ್‌ನ್ನು ಶುರುಮಾಡಿದೆ. ಹೌದು, ವರ-ವಧು ಇಲ್ಲದೆ ಮದುವೆ ನಡೆಯುತ್ತದೆ. 

ಮದುವೆ ಅಟೆಂಡ್‌ ಆಗಲು ಹಣ ಬೇಕು! 
ಹೌದು, ನಕಲಿ ಮದುವೆ ಆಚರಣೆಗಳು ನಡೆಯುತ್ತವೆ. ಇಲ್ಲಿ ಪಾರ್ಟಿ ಮಾಡೋದು ಮುಖ್ಯ. ಹೀಗಾಗಿ ಪಾರ್ಟಿಗಳಿಗೆ ನಿಜವಾದ ಜೋಡಿಯ ಅಗತ್ಯವಿಲ್ಲ. ಅತಿಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಸಜ್ಜಾಗಿ, ನಿಜವಾದ ಮದುವೆ ಎನ್ನುವಂತೆ ಅಲಂಕರಿಸಲಾದ ಸ್ಥಳಕ್ಕೆ ತೆರಳಿ, ಡೊಳ್ಳು, ನಗಾರ ಮುಂತಾದ ಸಂಗೀತದ ವಾದ್ಯಗಳಿಗೆ ರಾತ್ರಿಯಿಡೀ ಕುಣಿಯುತ್ತಾರೆ. ಇಂತಹ ಇವೆಂಟ್‌ಗಳಲ್ಲಿ ಭಾಗಿ ಆಗಲು ಟಿಕೆಟ್ ಇದ್ರೆ ಸಾಕು. ಟಿಕೆಟ್‌ ಕೊಟ್ಟು, ನೀವು ಪೂರ್ಣ ಪ್ರಮಾಣದ ಮದುವೆ ಆಚರಣೆಯ ಸವಿ ಆನಂದಿಸಬಹುದು.

ದೆಹಲಿಯಲ್ಲಿ ನಡೆದ ಫೇಕ್‌ ವೆಡ್ಡಿಂಗ್!‌ 
ಏಪ್ರಿಲ್ 25 ರಂದು, ದೆಹಲಿಯ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಅವಂತಿಕಾ ಜೈನ್‌ ಅವರು ಕುತುಬ್ ಮಿನಾರ್‌ಗೆ ಎದುದೇ ಇರುವ ಮೆಹ್ರೌಲಿ ಲೇನ್‌ನ ಝೈಲೋ ರೂಫ್‌ಟಾಪ್ ರೆಸ್ಟೋರೆಂಟ್‌ನಲ್ಲಿ ನಡೆದ ನಕಲಿ ಸಂಗೀತ ಬ್ಯಾಷ್‌ಗೆ ಹಾಜರಿ ಹಾಕಿದ್ದರು. ಈ ಬಗ್ಗೆ ಮಾತನಾಡಿದ ಅವರು, “ಕಾಲೇಜಿನ ದಿನಗಳಲ್ಲಿ, ನಾವು ಮದುವೆ ಪಾರ್ಟಿಯನ್ನು ಆಯೋಜಿಸುವ ಕನಸು ಕಂಡಿದ್ದೆವು. ಇನ್‌ಸ್ಟಾಗ್ರಾಮ್‌ನಲ್ಲಿ ಈ ಈವೆಂಟ್‌ನ ಜಾಹೀರಾತು ಕಂಡಾಗ, ಇದು ಆ ಕನಸನ್ನು ನನಸಾಗಿಸಲು ಸರಿಯಾದ ಅವಕಾಶವೆಂದು ಅರ್ಥ ಆಯ್ತು” ಎಂದು ಹೇಳಿದ್ದಾರೆ. ಇವರು, ಇವರ ಸ್ನೇಹಿತರು ಆನ್‌ಲೈನ್‌ನಲ್ಲಿ ಲಾಗಿನ್‌ ಆಗಿ, ಪ್ರತಿ ವ್ಯಕ್ತಿಗೆ ಸುಮಾರು 550 ರೂಪಾಯಿಗಳಷ್ಟು ಕೊಟ್ಟು, ಈ ಇವೆಂಟ್‌ಗೆ ಪ್ರವೇಶ ಪಡೆದಿದ್ದರು.

ಇವೆಂಟ್‌ನಲ್ಲಿ ಏನೇನು ಇತ್ತು?
ಝೈಲೋದಲ್ಲಿ ಡ್ರೆಸ್ ಕೋಡ್ ಕಟ್ಟುನಿಟ್ಟಾಗಿ ದೇಸಿ ಆಗಿತ್ತು. ಕಪ್ಪು ಬ್ಲೌಸ್‌ನೊಂದಿಗೆ ಪ್ಲಮ್-ಬಣ್ಣದ ಲೆಹೆಂಗಾವನ್ನು ಜೈನ್‌ ಧರಿಸಿ ಹೋಗಿದ್ದರು. ಆದರೆ ಆ ಪಾರ್ಟಿಯಲ್ಲಿ ಎಲ್ಲರೂ ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ, ನಿಜವಾದ ಸಂಗೀತ ಪಾರ್ಟಿ ಎನ್ನುವಂತೆ ರೆಡಿಯಾಗಿದ್ದರು. ಹಳದಿ-ಮೆಜೆಂಟಾ ಬಟ್ಟೆಗಳು, ಚಂಡು ಹೂವಿನ ಅಲಂಕಾರಗಳು, ವಿಚಿತ್ರವಾದ ಫೋಟೋ ಬೂತ್‌ಗಳೊಂದಿಗೆ ಪಕ್ಕಾ ಇದು ಮದುವೆ ಸ್ಥಳ ಎನ್ನುವಂತೆ ರೆಡಿಯಾಗಿತ್ತು. ಮೆಹಂದಿ ಕಲಾವಿದರು ಕೈಗಳಿಗೆ ಮೆಹೆಂದಿ ಹಾಕಲು ರೆಡಿಯಾಗಿದ್ದರು. ಮೆಹೆಂದಿ ಹಾಕುವವರು, ಸಂಗೀತದ ಮಧ್ಯೆ ಫುಲ್‌ ಹಬ್ಬದ ವಾತಾವರಣ ಅಲ್ಲಿತ್ತು. ಮದುವೆ ಆಗೋ ವರ-ವಧು ಇಲ್ಲ ಎನ್ನೋದು ಬಿಟ್ಟರೆ ಉಳಿದ ಎಲ್ಲ ಆಚರಣೆಗಳು, ಖುಷಿ, ವಾತಾವರಣ ಅಲ್ಲಿತ್ತು. ಯುವಜನತೆ ಒಂದೇ ಅಲ್ಲದೆ, 40 ವರ್ಷ ಮೇಲ್ಪಟ್ಟವರು ಕೂಡ ಈ ಫೇಕ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇವೆಂಟ್ ಮುಗಿದಾಗ ಯಾರಿಗೂ ಅಲ್ಲಿಂದ ಹೊರಡಲು ಇಷ್ಟ ಇರಲಿಲ್ಲ. 

ಇದು ಹೊಸ ವಿಷಯ ಅಲ್ಲ! 
ಡಿಸೆಂಬರ್ 2024 ರಲ್ಲಿ ಆರಂಭವಾದ ʼಜುಮ್ಮಾ ಕಿ ರಾತ್ʼ ಇವೆಂಟ್ ಕಂಪನಿಯು ಇಲ್ಲಿಯವರೆಗೆ 2 ನಕಲಿ ಮದುವೆ ಪಾರ್ಟಿಗಳನ್ನು ಆಯೋಜಿಸಿತ್ತು. ಆದರೆ, ಫೇಕ್‌ ವೆಡ್ಡಿಂಗ್ ಹೊಸ ವಿಚಾರವಲ್ಲ. ಪ್ರಚಾರದ ಕಾರಣಕ್ಕೆ ಈ ರೀತಿ ಮಾಡಲಾಗುವುದು. ಉದಾಹರಣೆಗೆ, ಅಕ್ಟೋಬರ್ 2024 ರಲ್ಲಿ, ಶಾಂಗ್ರಿ-ಲಾ ಗ್ರೂಪ್ ತನ್ನ ವಿಶೇಷ ಮದುವೆ ಸೇವೆಯಾದ ಬಂಧನ್ ಅನ್ನು ಪ್ರಾರಂಭಿಸಿದಾಗ, ಫೇಕ್‌ ವೆಡ್ಡಿಂಗ್‌ ಮಾಡಿತ್ತು. ಮಾಡೆಲ್ ಜೋಡಿಯು ತರುಣ್ ತಾಹಿಲಿಯಾನಿ ವಿನ್ಯಾ ಮಾಡಿದ್ದ ಉಡುಗೆಯಲ್ಲಿ ಮಿಂಚಿತ್ತು. ಆದರೆ ಅತಿಥಿಗಳು ಲೈವ್ ಸೂಫಿ ಪ್ರದರ್ಶನ, ರುಚಿಕರವಾದ ಅಡುಗೆ ಸವಿಯನ್ನು ಪಡೆದರು. ಮದುವೆಯ ನೃತ್ಯ ಕೊರಿಯೊಗ್ರಫಿ ಕಂಪನಿಗಳು ಸೋಶಿಯಲ್‌ ಮೀಡಿಯಾಗೆ ಕಂಟೆಂಟ್‌ ಬೇಕು ಎಂದು ನಕಲಿ ಮದುವೆಗಳನ್ನು ಆಯೋಜಿಸುತ್ತವೆ. ನಿಜವಾದ ಮದುವೆ ಎನ್ನುವಂತೆ ಕಾಣುವ ಈ ವೀಡಿಯೊಗಳು ವೈರಲ್ ಆಗುವ ಸಾಧ್ಯತೆಯೇ ಹೆಚ್ಚಿದೆ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿಯನ್ನು ಆಚರಿಸಲು, ಸೋಶಿಯಲ್‌ ಗ್ಯಾದರಿಂಗ್‌ಗಾಗಿ ಈ ನಕಲಿ ಮದುವೆಗಳನ್ನು ಆಯೋಜಿಸುತ್ತಾರೆ. ನಿಮ್ಮ ಸಂಬಂಧಿಕರು ನಿಮ್ಮ ಮದುವೆಯ ಪ್ಲ್ಯಾನ್ ಬಗ್ಗೆ ಕೇಳಿದರೆ, ನಕಲಿ ಮದುವೆಯ ಪಾರ್ಟಿಗೆ ಹೋಗಲು ಹೇಳಿ‌ ( ತಮಾಷೆಯಾಗಿ ) ಆದರೆ, ಇಂತಹ ಆಚರಣೆಗೆ ಹಾಜರಾಗಲು ನೀವು ಹಣ ಪಾವತಿಸಲು ಸಿದ್ಧರಿದ್ದೀರಾ?