ಬೆಂಕಿ ಉಪಕರವು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಥವಾ ಇವುಗಳ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣ ಇಲ್ಲವೇ ಸ್ವಾಧೀನದಲ್ಲಿರುವ ಯಾವುದೇ ಕಟ್ಟಡದ ಮೇಲೆ ಉಪಕರ ವಿಧಿಸುವುದಿಲ್ಲ.

ವಿಧಾನ ಪರಿಷತ್‌ (ಆ.22): ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಕಾರ್ಯಕ್ಷಮತೆಯನ್ನು ಒಟ್ಟಾರೆ ಹೆಚ್ಚಿಸುವ ಉದ್ದೇಶದಿಂದ ಹೊಸದಾಗಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡಗಳ ಸ್ವತ್ತು ತೆರಿಗೆ ಮೇಲೆ ಶೇಕಡ 1ರಷ್ಟು ಬೆಂಕಿ ಉಪಕರ ವಿಧಿಸಲು ಅವಕಾಶ ಕಲ್ಪಿಸುವ 2025ನೇ ಸಾಲಿನ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ)ವಿಧೇಯಕಕ್ಕೆ ಮೇಲ್ಮನೆ ಅಂಗೀಕಾರ ನೀಡಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕ ಮಂಡಿಸಿದ ಗೃಹ ಸಚಿವ ಡಾ। ಜಿ.ಪರಮೇಶ್ವರ್, ಬೆಂಕಿ ಉಪಕರ ಜಾರಿಗೆ ತರುವಂತೆ ಕೇಂದ್ರದ ಇಂಡಿಯನ್‌ ಆಡಿಟ್‌ ಅಕೌಂಟ್ಸ್ ಇಲಾಖೆ ನಾಲ್ಕು ವರ್ಷಗಳಿಂದ ಆರು ಪತ್ರಗಳನ್ನು ಬರೆದ ಹಿನ್ನೆಲೆಯಲ್ಲಿ ಈ ವಿಧೇಯಕ ಜಾರಿಗೆ ತರಲಾಗಿದೆ.

ಬೆಂಕಿ ಉಪಕರವು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಥವಾ ಇವುಗಳ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣ ಇಲ್ಲವೇ ಸ್ವಾಧೀನದಲ್ಲಿರುವ ಯಾವುದೇ ಕಟ್ಟಡದ ಮೇಲೆ ಉಪಕರ ವಿಧಿಸುವುದಿಲ್ಲ. 21 ಮೀಟರ್‌ಗಿಂತ ಹೆಚ್ಚಿರುವ ಕಟ್ಟಡಗಳಿಗೆ ಮಾತ್ರ ಈ ಉಪಕರ ಅನ್ವಯವಾಗುತ್ತದೆ. ಆದರೆ, ಶಾಲೆ, ಕಾಲೇಜುಗಳಿಗೆ ಬೇರೆಯದೇ ನಿಯಮವಿರುತ್ತದೆ. ನಿಗದಿಪಡಿಸಿದ ಎತ್ತರಕ್ಕಿಂತ ಹೆಚ್ಚಿರುವ ವಸತಿ ಕಟ್ಟಡಗಳಿಗೂ ಉಪಕರ ವಿಧಿಸಲಾಗುವುದು ಎಂದರು.

ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ ಎಂಬ ಸದಸ್ಯರ ಮಾತನ್ನು ಅಲ್ಲಗಳೆದ ಡಾ। ಪರಮೇಶ್ವರ್‌, ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಜಾರಿಯಲ್ಲಿದೆ. ಶೇ.18, 28, 42ರವರೆಗೆ ಜಿಎಸ್‌ಟಿ ಇದೆ. ಈಗ ಮೂರು ಹಂತದ ಜಿಎಸ್‌ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿದೆ ಎಂದು ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ಸಿನ ಐವಾನ್‌ ಡಿಸೋಜಾ, ಜೆಡಿಎಸ್‌ನ ಟಿ.ಎ.ಶರವಣ, ಗೋವಿಂದರಾಜು, ಬಿಜೆಪಿ ಡಿ.ಎಸ್‌.ಅರುಣ, ಎನ್‌.ರವಿಕುಮಾರ್‌ ಅವರು ಉಪಕರ ಹೊರೆ ಅತಿ ಎತ್ತರದ ಕಟ್ಟಡ ಇರುವ ಬೆಂಗಳೂರಿನ ಜನರ ಮೇಲೆ ಬೀಳಲಿದೆ. ಈಗಾಗಲೇ ಬೆಲೆ ಏರಿಕೆ, ನಾನಾ ರೀತಿಯ ತೆರಿಗೆಯಿಂದ ಜನರಿಗೆ ಹೊರೆಯಾಗಿದೆ. ಒಂದು ರೀತಿಯ ತೆರಿಗೆ ದಾಳಿ ನಡೆಯುತ್ತಿದೆ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯನ್ನು ಆಧುನೀಕರಣಗೊಳಿಸಬೇಕು ಎಂದು ಹೇಳಿದರು.