ಮಂಗಳೂರಿನ ಬೋಳಾರದಲ್ಲಿರುವ ಶಾದಿ ಮಹಲ್ ಸಭಾಂಗಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಸ್ಲಿಂ ಮುಖಂಡರ ತುರ್ತು ಸಭೆ ನಡೆಯಿತು.
ಮಂಗಳೂರು/ಬೆಂಗಳೂರು (ಮೇ.30): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳನ್ನು ತಡೆಯುವಲ್ಲಿ ರಾಜ್ಯದ ಗೃಹ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ, ಜಿಲ್ಲೆಯ ಮುಸ್ಲಿಮರ ಕಡೆಗಣನೆಗೆ ಬೇಸತ್ತು ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದಿಂದ ಹಿಡಿದು ರಾಜ್ಯ ಘಟಕದ ವರೆಗಿನ ವಿವಿಧ ಹುದ್ದೆಗಳಲ್ಲಿರುವ 200ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಗುರುವಾರ ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ಪ್ರಕಟಿಸಿದ್ದಾರೆ. ಬಂಟ್ವಾಳದಲ್ಲಿ ಮಂಗಳವಾರ ನಡೆದ ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಂ ಅವರ ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರ ಈ ತೀರ್ಮಾನ ಹೊರಬಿದ್ದಿದೆ.
ಮಂಗಳೂರಿನ ಬೋಳಾರದಲ್ಲಿರುವ ಶಾದಿ ಮಹಲ್ ಸಭಾಂಗಣದಲ್ಲಿ ಗುರುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಸ್ಲಿಂ ಮುಖಂಡರ ತುರ್ತು ಸಭೆ ನಡೆಯಿತು. ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಮುಸ್ಲಿಂ ಸಮುದಾಯಕ್ಕೆ ಆಗಿರುವ ಅನ್ಯಾಯ, ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದ್ದಂತೆ ಕಾರ್ಯಕರ್ತರು ವೇದಿಕೆಗೆ ನುಗ್ಗಿ ‘ನಮಗೆ ನ್ಯಾಯಬೇಕು’ ಎಂದು ಘೋಷಣೆ ಕೂಗಿದರು.
ನಾಯಕರ ಸಾಮೂಹಿಕ ರಾಜೀನಾಮೆಗೆ ಆಗ್ರಹಿಸಿದರು. ಆಗ ಎಂ.ಎಸ್.ಮುಹಮ್ಮದ್, ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್, ಸುಹೈಲ್ ಕಂದಕ್ ಮತ್ತಿತರರು ಜನಸಮೂಹವನ್ನು ಸಮಾಧಾನಪಡಿಸಲು ಯತ್ನಿದರು. ಆದರೆ, ಕಾರ್ಯಕರ್ತರು ಪಟ್ಟು ಬಿಡಲಿಲ್ಲ. ಕೊನೆಗೆ, ನಾಯಕರು ರಾಜೀನಾಮೆ ನಿರ್ಧಾರಕ್ಕೆ ಬದ್ಧ ಎಂದು ಘೋಷಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಂ.ಎಸ್. ಮುಹಮ್ಮದ್, ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಶಾಹುಲ್ ಹಮೀದ್ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದರು.
ನಂತರ ಇತರ ನಾಯಕರು ಕೂಡ ರಾಜೀನಾಮೆ ಪ್ರಕಟಿಸಿದರು. ಇದೇ ವೇಳೆ, ಪೊಲೀಸ್ ಇಲಾಖೆಯಲ್ಲೂ ಅಮೂಲಾಗ್ರ ಬದಲಾವಣೆ ಆಗಬೇಕು ಎಂಬ ಕೂಗು ಕಾರ್ಯಕರ್ತರಿಂದ ಕೇಳಿ ಬಂತು. ಯೂಟರ್ನ್‌ಗೆ ಗದ್ದಲ, ಅಬ್ದುಲ್ ರಹೀಂ ಅವರ ಹತ್ಯೆಯಾದಾಗ ಹತ್ಯೆ ಖಂಡಿಸಿದ್ದ ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಆದರೆ, ಗುರುವಾರ ಸಭೆ ಸೇರಿದಾಗ ಮುಖಂಡರು ಮಾತು ಬದಲಿಸಿ, ಸಿಎಂ ತಮ್ಮ ಜೊತೆ ಮಾತನಾಡಿದ್ದು, ಅವರ ಮುಂದಿನ ನಡೆ ನೋಡಿ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದರು. ಇದು ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಈಗಲೇ ರಾಜೀನಾಮೆ ನೀಡಿ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಸಭಾಂಗಣದಲ್ಲಿ ಗದ್ದಲ ಏರ್ಪಟ್ಟಿತು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಹರಸಾಹಸ ಪಟ್ಟರಾದರೂ, ಪ್ರಯೋಜನವಾಗಲಿಲ್ಲ. ನಂತರ, ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಮುಸ್ಲಿಂ ಮುಖಂಡರು ಒಬ್ಬೊಬ್ಬರಾಗಿ ರಾಜೀನಾಮೆ ಘೋಷಣೆ ಮಾಡಿದರು. ಗ್ರಾ.ಪಂ.ಚುನಾಯಿತ ಪ್ರತಿನಿಧಿಗಳು, ಬೂತ್, ಬ್ಲಾಕ್, ಜಿಲ್ಲಾಮಟ್ಟದ ಪದಾಧಿಕಾರಿಗಳು, ಜಿ.ಪಂ., ತಾ.ಪಂ., ಮನಪಾ ಮಾಜಿ ಸದಸ್ಯರು, ಪಕ್ಷದ ವಿವಿಧ ಘಟಕಗಳಲ್ಲಿ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು, ಯುವ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಿಕಪ್ ಚಾಲಕ ರಹೀಂ ಕೊಲೆ: ಐವರ ಸೆರೆದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಇರಾಕೋಡಿಯಲ್ಲಿ ಮಂಗಳವಾರ ನಡೆದ ಪಿಕಪ್ ಚಾಲಕ ಅಬ್ದುಲ್ ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದಾರೆ.ಬಂಧಿತರನ್ನು ಕೂರಿಯಾಳ ಮುಂಡರಕೋಡಿ ನಿವಾಸಿ ದೀಪಕ್ (21), ಅಮ್ಮುಂಜೆ ಶಿವಾಜಿ ನಗರ ನಿವಾಸಿಗಳಾದ ಪೃಥ್ವಿರಾಜ್(21) ಹಾಗೂ ಚಿಂತನ್ (19), ಸುಮಿತ್, ರವಿರಾಜ್ ಎಂದು ಗುರುತಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಐದು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಗುರುವಾರ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 15 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.
