ಬಿಜೆಪಿಯವರು ಹಾಗೂ ಅನೇಕ ಸಂಘಟನೆಗಳು ಕರಾವಳಿ ಭಾಗದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಇದರಿಂದ ನಷ್ಟ ಆಗುವುದು ಇಡೀ ರಾಜ್ಯಕ್ಕೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಮೇ.31): ಬಿಜೆಪಿಯವರು ಹಾಗೂ ಅನೇಕ ಸಂಘಟನೆಗಳು ಕರಾವಳಿ ಭಾಗದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಇದರಿಂದ ನಷ್ಟ ಆಗುವುದು ಇಡೀ ರಾಜ್ಯಕ್ಕೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಮತ್ತೊಂದು ಕೋಮು ಹತ್ಯೆ ಹಾಗೂ ಗಲಭೆ ವಿಚಾರ ಕುರಿತು ವಿಧಾನಸೌಧ ಆವರಣ ಹಾಗೂ ಅರಮನೆ ಮೈದಾನದ ಬಳಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಪ್ರಕರಣದ ಬಗ್ಗೆ ಪಕ್ಷದ ವತಿಯಿಂದ ಒಂದು ತಂಡ ಕಳುಹಿಸಿ ವರದಿ ನೀಡಲು ಹೇಳಿದ್ದೇವೆ. ಅಧಿಕಾರಿಗಳು ನೀಡುವ ವರದಿ ಬೇರೆ, ಇದೀಗ ಸಾರ್ವಜನಿಕರ ಜತೆ ಚರ್ಚೆ ಮಾಡಿ ವರದಿ ನೀಡಲು ನಮ್ಮ ಪಕ್ಷದವರಿಗೆ ತಿಳಿಸಿದ್ದೇನೆ ಎಂದರು. ನೀವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೂ ಪರಿಸ್ಥಿತಿ ನಿಯಂತ್ರಣವಾಗುತ್ತಿಲ್ಲ ಎಂದು ಕೇಳಿದಾಗ, ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ. ಕರಾವಳಿಯಲ್ಲಿ ಶಾಂತಿ ನೆಲೆಸಬೇಕು. ಬಿಜೆಪಿಯವರು ಹಾಗೂ ಅನೇಕ ಸಂಘಟನೆಗಳು ಈ ಭಾಗದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ.
ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇಡೀ ರಾಜ್ಯಕ್ಕೆ ನಷ್ಟ. ಇದು ಒಂದು, ಎರಡು ಸಾವಿನ ವಿಚಾರ ಮಾತ್ರವಲ್ಲ. ಇಡೀ ಕರಾವಳಿ ಭಾಗಕ್ಕೆ ಬಿದ್ದಿರುವ ಕೊಡಲಿಪೆಟ್ಟು. ಜನ ಆಂತಕಕ್ಕೆ ಒಳಗಾಗುವುದು, ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ದೇಶಗಳಿಗೆ ಹೋಗುವುದು, ಬಂಡವಾಳ ಹೂಡಿಕೆದಾರರು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ವಸ್ತುಸ್ಥಿತಿ ಅರಿತುಕೊಳ್ಳಬೇಕೆಂದು ಬಿಜೆಪಿ ಸ್ನೇಹಿತರು ಹಾಗೂ ಬೇರೆ ಬೇರೆ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದರು.
ಗ್ಯಾರಂಟಿ ನಿಲ್ಲಲ್ಲ: ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಜನರ ಕಲ್ಯಾಣಕ್ಕಾಗಿಯೇ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಇರೋವರೆಗೂ ಈ ಗ್ಯಾರಂಟಿ ನಿಲ್ಲಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ನಗರದಲ್ಲಿ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಮುಂದೆಯೂ ಜನ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಎಂದರು.
ಈಗ ಕಂದಾಯ ಇಲಾಖೆಯಿಂದ 6ನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಯೋಜನೆ ಜಾರಿಗೊಂಡಿದೆ. ವಿರೋಧ ಪಕ್ಷಗಳು ಎಷ್ಟೇ ಟೀಕಿಸಿದರೂ ಸರಿ, ನಾವು ಜನಸೇವಾ ಕಾರ್ಯವನ್ನು ಮುಂದುವರಿಸುತ್ತೇವೆ. ಟೀಕೆಗಳು ಅಳಿಯುತ್ತವೆ. ಆದರೆ, ಕೆಲಸಗಳು ಉಳಿಯುತ್ತವೆ ಎಂಬ ತತ್ವದಲ್ಲಿ ನಮಗೆ ನಂಬಿಕೆಯಿದೆ ಎಂದು ಹೇಳಿದರು. ಕರ್ನಾಟಕ ಅಭಿವೃದ್ಧಿಯ ಪಥದತ್ತ ಮುನ್ನುಗ್ಗುತ್ತಿದೆ. ಪ್ರವಾಸೋದ್ಯಮ ಸೇರಿದಂತೆ ಎಲ್ಲ ಇಲಾಖೆಗಳಿಗೂ ರಾಜ್ಯದ ಪ್ರಗತಿಗೆ ಶ್ರಮವಹಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇವೆ. ಹೊಸ, ಹೊಸ ಯೋಜನೆಗಳ ಮೂಲಕ ಜನರ ಆರ್ಥಿಕ ಶಕ್ತಿಯನ್ನು ಮತ್ತಷ್ಟು ವೃದ್ಧಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
