ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ದುರುಪಯೋಗವಾಗುತ್ತಿದ್ದು, ಸುಮಾರು 24.55 ಲಕ್ಷ ಅನುಮಾನಾಸ್ಪದ ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸುವರ್ಣ ವಿಧಾನಸಭೆ (ಡಿ.12): ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ದುರುಪಯೋಗವಾಗುತ್ತಿದ್ದು, ಸುಮಾರು 24.55 ಲಕ್ಷ ಅನುಮಾನಾಸ್ಪದ ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ 32,000 ರು. ನಿಗದಿಗೊಳಿಸಲಾಗಿದೆ. ನಿಖರ ಆದಾಯ ಅಂದಾಜು ಮಾಡುವುದೇ ಸವಾಲಾಗಿದೆ. ಉದಾಹರಣೆಗೆ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ವಾರ್ಷಿಕ 24 ಸಾವಿರ ರು. ಹೋಗುತ್ತದೆ. ಬೇರೆ ಸವಲತ್ತೂ ಸಿಗುತ್ತಿದೆ. ಕೆಳ ಹಂತ ಅಧಿಕಾರಿಗಳು ಕುಳಿತಲ್ಲೇ ತಮಗೆ ತೋಚಿದಷ್ಟು ಆದಾಯ ನಿಗದಿಪಡಿಸಿ ಆದಾಯ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಹೇಳಿದರು.
ನಕಲಿ ಮಾಹಿತಿ ಗುರುತಿಸುವ ವ್ಯವಸ್ಥೆಯಿಲ್ಲ: ಆಧಾರ್ ಕಾರ್ಡ್ ಪ್ರಕಾರ 60 ವರ್ಷ ಆಗಿರುವುದಿಲ್ಲ. ಸುಳ್ಳು ದಾಖಲೆ ಕೊಟ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇಲ್ಲಿ ಬಿಪಿಎಲ್ ಕಾರ್ಡ್, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಅರ್ಜಿ ಹಾಕುವವರ ನಿಖರ ಆದಾಯ ಅಂದಾಜು ಮಾಡುವ ವ್ಯವಸ್ಥೆ ಇಲ್ಲ. ಆದಾಯ ತೆರಿಗೆ ಪಾವತಿಸುವ 10 ಸಾವಿರ ಮಂದಿ, ಸರ್ಕಾರಿ ವೇತನ ಪಡೆಯುವವರು ಈ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇದು ಸರಿಯಾಗಬೇಕಾದರೆ, ಅರ್ಹರನ್ನು ಗುರುತಿಸುವ ವ್ಯವಸ್ಥೆ ಬರಬೇಕು. ನಿಖರ ಆದಾಯ ಅಂದಾಜು ಮಾಡುವ ವ್ಯವಸ್ಥೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಘನತ್ಯಾಜ್ಯ ಘಟಕ ಮೀಸಲು ಜಾಗಕ್ಕೆ ರಸ್ತೆ ಸಂಪರ್ಕಕ್ಕೆ ಸೂಚಿಸುವೆ
ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಂಬಳಗೂಡು ಗ್ರಾಮ ಪಂಚಾಯಿತಿ ಕಣಿಮಿಣಿಕೆ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನತ್ಯಾಜ್ಯ ಘಟಕಕ್ಕೆ ಮೀಸಲಿಟ್ಟ ಜಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಶಾಸಕ ಎಸ್.ಟಿ.ಸೋಮಶೇಖರ್ ಅವರು ಗಮನ ಸೆಳೆಯುವ ಸೂಚನೆಯಡಿ ವಿಚಾರ ಪ್ರಸ್ತಾಪಿಸಿ ವಿಧಾನಸೌಧದಲ್ಲಿ ಕುಳಿತ ಐಎಎಸ್ ಅಧಿಕಾರಿ ಪ್ರತಿಷ್ಠಿತ ಸಂಸ್ಥೆ ಜೊತೆಗೆ ಸೇರಿಕೊಂಡು ಈ ಘನತ್ಯಾಜ್ಯ ಘಟಕಕ್ಕೆ ಮೀಸಲಾದ ಜಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಸ್ತೆ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದರು.


