ಸಿಎಂ ಸಿದ್ದರಾಮಯ್ಯಗೆ ಯಾಕೆ ಇಂತಹ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನವರು ರಾಜ್ಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಜನ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಶಿವಮೊಗ್ಗ (ಸೆ.22): ಸಿಎಂ ಸಿದ್ದರಾಮಯ್ಯಗೆ ಯಾಕೆ ಇಂತಹ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನವರು ರಾಜ್ಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಜನ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಮಂಜುನಾಥ ದೇವರ ಕೋಟ್ಯಾಂತರ ಭಕ್ತರ ಭಕ್ತಿ ಮತ್ತು ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ಕೆಲಸಕ್ಕೆ ಕಾಂಗ್ರೆಸ್‌ ಸರ್ಕಾರ ಕೈ ಹಾಕಿತು. ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಷಯದಲ್ಲೂ ಗೊಂದಲವನ್ನು ಸೃಷ್ಟಿ ಮಾಡುವ ಕೆಲಸ ಮಾಡಿದರು. ಹಿಂದುಗಳಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ.

ಗಣಪತಿ ಹಬ್ಬಕ್ಕೂ ಕೂಡ ಕಡಿವಾಣ ಹಾಕಿ ಕಾನೂನುಗಳನ್ನು ಸೃಷ್ಟಿ ಮಾಡಿ ವಿಸರ್ಜನ ಮೆರವಣಿಗೆ ಮಾಡುವುದಕ್ಕೂ ಕಲ್ಲು ಹಾಕುತ್ತಿದೆ. ಇದನ್ನು ದುರ್ಬುದ್ಧಿ ಎನ್ನದೆ ಬೇರೆ ಏನು ಹೇಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಬ್ರಿಟಿಷ್ ಆಳ್ವಿಕೆ, ಟಿಪ್ಪು ಆಳ್ವಿಕೆ, ನಿಜಾಮರ ಆಳ್ವಿಕೆ ನಾಚಿಸುವಂತೆ ಸಿದ್ದರಾಮಯ್ಯ ಆಳ್ವಿಕೆ ನಡೆಸುತ್ತಿದ್ದಾರೆ. ಸರ್ಕಾರ ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಪುನೀತ್ ಕೆರೆಹಳ್ಳಿ ಯವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿ ಎರಡು ವಾರ ಆಯ್ತು. ಹಿಂದೂ ಕಾರ್ಯಕರ್ತ ಶರಣ್ ಪಂಪ್‌ವೆಪ್‌ರನ್ನು ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ತಡೆಯೊಡ್ಡುವ ಕೆಲಸವನ್ನು ಮಾಡಿದ್ದಾರೆ. ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ. ಮುಂದೊಂದು ದಿನ ಜನರೇ ಬುದ್ಧಿ ಕಲಿಸುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ. ಆದರೂ ಜಾತಿ ಗಣತಿಗೆ ಮುಂದಾಗಿದೆ. ಪ್ರಜಾಪ್ರಭುತ್ವ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಗೌರವಿಸುವುದಾಗಿ ಹೇಳಿ ಮಣ್ಣು ತಿನ್ನೋ ಕೆಲಸಕ್ಕೆ ಕೈ ಹಾಕಿದ್ದಾರೆ. ಇವರೆಂತಹ ದುಷ್ಟರು ಎಂದರೆ 47 ಹೊಸ ಜಾತಿಗಳನ್ನು ಹುಟ್ಟುಹಾಕಲು ಹೊರಟಿದ್ದರು. ಸಿದ್ದರಾಮಯ್ಯ ಸರ್ಕಾರಕ್ಕೆ ಯಾರು ಈ ಅಧಿಕಾರ ಕೊಟ್ಟಿದ್ದಾರೆ. ಇಂತಹ ನೀಚ ಸರ್ಕಾರಕ್ಕೆ ಬುದ್ಧಿ ಕಲಿಸಲು ರಾಜ್ಯ ಜನ ಬೀದಿಗೀಳಿದು ಹೋರಾಟ ಮಾಡಬೇಕಿದೆ ಎಂದರು. ಇಂತಹ ಅಯೋಗ್ಯ ಮುಖ್ಯಮಂತ್ರಿ ಅಧಿಕಾರದಲ್ಲಿದ್ದರೂ ಎಂದು ರಾಜ್ಯದ ಜನತೆ ಮಾತನಾಡುವ ಸ್ಥಿತಿ ಸಿದ್ದರಾಮಯ್ಯನವರೇ ತಂದುಕೊಂಡಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಸಮಾಜ ಒಡೆಯುವ ಕೆಲಸ ಕೈಬಿಡಿ. ಭಗವಂತ ನಿಮಗೆ ಒಳ್ಳೆಯದು ಮಾಡುತ್ತಾನೆ ಎಂದು ಸಲಹೆ ನೀಡಿದರು.

ಎರಡು ದಿನಗಳ ಕಾಲ ಬಿಜೆಪಿಯ ಚಿಂತನ ಶಿಬಿರದಲ್ಲಿ ಒಕ್ಕೊರಲಿನಿಂದ ಜಾತಿ ಯಾವುದೇ ಇದ್ದರೂ ಹಿಂದೂ ಎಂದೆ ಬರೆಸಬೇಕು ಎಂಬ ನಿರ್ಣಯ ಮಾಡಿದ್ದೇವೆ. ಈ ದೇಶದ ಐಕ್ಯತೆ ಅಖಂಡತೆ ಭದ್ರತೆಗಾಗಿ ಹಿಂದೂ ಸಮಾಜ ಒಗ್ಗಟ್ಟಾಗಿ ಇರಲು ಹಿಂದು ಎಂದು ಬರೆಸಬೇಕು ಎಂದು ತಿಳಿಸಿದರು. ದೇಶದ ಜನತೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಳೆದು ಕೊಂಡಿದ್ದಾರೆ. ನಮ್ಮ ಪಕ್ಷದ ನಾಯಕತ್ವದ ಬಗ್ಗೆ ಜನರು ಯಾಕೆ ವಿಶ್ವಾಸ ಕಳೆದುಕೊಂಡಿದ್ದಾರೆಂದು ಕಾಂಗ್ರೆಸ್‌ನವರು ಆಲೋಚನೆ ಮಾಡಬೇಕು. ವೋಟ್ ಜೋರಿ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ದೇಶದ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಸವಾಲು

ದೇಶದ ಜನತೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ 3ನೇ ಬಾರಿಗೆ ಅಧಿಕಾರಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷ 60 ವರ್ಷಗಳ ಅಧಿಕಾರದಲ್ಲಿ ಯಾವತ್ತಾದರೂ ದೇಶ ಅಭಿವೃದ್ಧಿಯತ್ತ ಹೋಗಬೇಕು ಎಂದು ಯೋಚನೆ ಮಾಡಿತ್ತಾ? 2047ಕ್ಕೆ ವಿಕಸಿತ ಭಾರತ ಆಗಬೇಕು ಎಂಬ ಕಲ್ಪನೆಯನ್ನು ಮೋದಿ ಹೊಂದಿದ್ದಾರೆ. ಅಮೆರಿಕದಂತ ದೇಶಕ್ಕೆ ಮೋದಿ ಸವಾಲು ಹಾಕಿದ್ದಾರೆ. ಜಿಎಸ್‌ಟಿ ಸರಳಿಕರಣ ಮಾಡುತ್ತಿದ್ದಾರೆ. ಭಾರತ ಇಂದು ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದನ್ನು ಸಹಿಸಿಕೊಳ್ಳಲಾಗಿದೆ ರಾಹುಲ್ ಗಾಂಧಿ ಮನಬಂದಂತೆ ನಡೆದು ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಸೆ.24 ರಂದು ರಾಜ್ಯದ 224 ಕ್ಷೇತ್ರಗಳಲ್ಲೂ ಬಿಜೆಪಿಯಿಂದ ರಸ್ತೆ ರೊಕೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.