ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗದ ನಾಯಕರೂ ಆಗಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಹೀಗಾಗಿಯೇ ಜನೌಷಧ ಕೇಂದ್ರ ಸ್ಥಗಿತಗೊಳಿಸಲು ಮುಂದಾಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುರ್ವಣ ವಿಧಾನಸೌಧ (ಡಿ.12): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗದ ನಾಯಕರೂ ಆಗಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಹೀಗಾಗಿಯೇ ಜನೌಷಧ ಕೇಂದ್ರ ಸ್ಥಗಿತಗೊಳಿಸಲು ಮುಂದಾಗಿದ್ದರು. ಈಗ ನ್ಯಾಯಾಲಯವೇ ತಕ್ಕ ಪಾಠ ಕಲಿಸಿದ್ದು, ಅದನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಜನೌಷಧ ಕೇಂದ್ರಗಳ ಮೂಲಕ ಬಡ ಜನರಿಗೆ ಕೈಗೆಟಕುವ ದರದಲ್ಲಿ ಔಷಧ ವಿತರಣೆ ಮಾಡಲಾಗುತ್ತಿತ್ತು. ಪ್ರಧಾನಿ ಮೋದಿ ಅವರ ಈ ಯೋಜನೆಯಿಂದ ಹಲವು ಬಡವರಿಗೆ ಅನುಕೂಲವಾಗಿದೆ.
ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ಸಮುದಾಯಕ್ಕೆ ಸೇರಿ ಮೂರು ಬಾರಿ ಪ್ರಧಾನಿ ಆದ ಮೋದಿ ಅವರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಬಡವರ ಯೋಜನೆಗೆ ಕಲ್ಲು ಹಾಕುವ ಪ್ರಯತ್ನ ಮಾಡಿದರು. ಜನೌಷಧ ಕೇಂದ್ರಗಳನ್ನು ರದ್ದುಪಡಿಸಲು ಆದೇಶಿಸಿದ್ದರು. ಇದಕ್ಕೆ ವಿರುದ್ಧವಾಗಿ ನ್ಯಾಯಾಲಯ ಆದೇಶ ಮಾಡಿದೆ. ಇನ್ನಾದರೂ ದ್ವೇಷದ ರಾಜಕಾರಣ ಬದಿಗೊತ್ತಿ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದರು.
ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ
ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ, ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ರಾಜ್ಯ, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ದಿಸೆಯಲ್ಲಿ ವಿದ್ಯಾರ್ಥಿ ಬದುಕಿನಲ್ಲಿ ಛಲ, ಪರಿಶ್ರಮದಿಂದ ಮಾತ್ರ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ರಾಧಾಕೃಷ್ಣ ಆಡಿಟೋರಿಯಂನಲ್ಲಿ ನಡೆದ 2025-2026ನೇ ಸಾಲಿನ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದ್ದು, ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿ ಅನುದಾನ ನೀಡುತ್ತಿವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನಾದ್ಯಂತ ನೂತನ ಶಾಲಾ ಕಾಲೇಜು, ವಸತಿ ಶಾಲೆ, ಹಾಸ್ಟೆಲ್ ನಿರ್ಮಿಸಿ ಸಕಲ ಸೌಲಭ್ಯದ ಮೂಲಕ ರಾಜ್ಯದಲ್ಲಿಯೇ ಶಿಕಾರಿಪುರ ಶೈಕ್ಷಣಿಕ ಕೇಂದ್ರವಾಗಿ ಗುರುತಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ದೆಸೆಯಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಸ್ಥಳೀಯ ಕಾಲೇಜಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ನೀಡಿದ ಮಹತ್ವವನ್ನು ಪಠ್ಯೇತರ ಚಟುವಟಿಕೆಗೆ ನೀಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಬಹು ಮುಖ್ಯವಾಗಿದೆ. ಆಸಕ್ತಿಗೆ ಪೂರಕವಾದ ಕ್ಷೇತ್ರ ಆಯ್ಕೆ ಮೂಲಕ ಸಾಧನೆಯಿಂದ ಗುರುತಿಸಿಕೊಳ್ಳಲು ತಿಳಿಸಿದರು. ಸಾಮಾಜಿಕ ಜಾಲತಾಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಮಾತ್ರ ಬಳಸಿಕೊಳ್ಳುವಂತೆ ಸಲಹೆ ನೀಡಿದರು.


