ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಪಕ್ಷದ ಭ್ರಷ್ಟಾಚಾರವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದರಿಂದ ಅವರನ್ನು ಆಡಳಿತ ಪಕ್ಷದ ನಾಯಕರು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
ನೆಲಮಂಗಲ/ದಾಬಸ್ಪೇಟೆ (ಜೂ.23): ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಪಕ್ಷದ ಭ್ರಷ್ಟಾಚಾರವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದರಿಂದ ಅವರನ್ನು ಆಡಳಿತ ಪಕ್ಷದ ನಾಯಕರು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ನಿಗಮದಲ್ಲಿ ನಡೆದಿರುವ ಗೋಲ್ಮಾಲ್ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರ ಪರ ಬ್ಯಾಟ್ ಬೀಸಿ ಮಾತನಾಡಿದರು. ಶಾಸಕ ಬಿ.ಆರ್.ಪಾಟೀಲ್ ಅವರು ರಾಜ್ಯದ ಗಂಭೀರವಾದ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಬಡವರಿಗೆ ಮನೆಗಳನ್ನು ಕೊಡಬೇಕಿತ್ತು. ಅಲ್ಲಿಯೂ ಸಹ ಭ್ರಷ್ಟಾಚಾರ ನಡೆದಿರುವುದನ್ನು ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಪಾಟೀಲರನ್ನು ಆಡಳಿತ ಪಕ್ಷದ ನಾಯಕರೇ ಬೆದರಿಸುತ್ತಿದ್ದಾರೆ ಎಂದರು.
ಯಾವುದೇ ಅನುಕೂಲವಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರು, ರೈತರಿಗೆ ಶಾಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಸರ್ಕಾರದಿಂದ ಬಡವರಿಗೆ ಯಾವುದೇ ಅನುಕೂಲವಿಲ್ಲ. ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಅನೇಕ ಬಡವರ ಪರ ಯೋಜನೆ ನೀಡಿದ್ದರು. ಈಗ ಆ ಎಲ್ಲಾ ಯೋಜನೆ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೀದಿಗಿಳಿದು ಹೋರಾಟ: ಈ ಸರ್ಕಾರದಲ್ಲಿ ಬರೀ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ಬಿಟ್ಟರೆ ಬೇರೆ ಯಾವುದೇ ಯೋಜನೆ ಇಲ್ಲ. ಎಲ್ಲೋ ಒಂದು ಕಡೆ ಸ್ಟೇಟ್ ಸ್ಪಾನ್ಸರ್ ಕರಪ್ಷನ್ ಗೆ ರಾಜ್ಯ ಸರ್ಕಾರವೇ ಉತ್ತೇಜನ ನೀಡುತ್ತಿದೆ ಅನ್ನಿಸುತ್ತಿದೆ. ಇದೆಲ್ಲವೂ ಬಿ.ಆರ್.ಪಾಟೀಲ್ ಹೇಳಿಕೆಯಿಂದ ಗೊತ್ತಾಗುತ್ತಿದೆ. ಇದೆಲ್ಲದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.
ವಸತಿ ಸಚಿವರ ರಾಜೀನಾಮೆ ಪಡೆಯಲಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲರೇ ಹೇಳಿದ್ದಾರೆ. ರಾಜಕಾರಣ ಏನೇ ಇರಲಿ ಪಾಟೀಲರು ಕಂಡದ್ದು ಕಂಡಹಾಗೆ ಹೇಳುವವರು, ಆದ್ದರಿಂದ ಭ್ರಷ್ಟಾಚಾರ ನಡೆದಿರುವುದು ಕನ್ನಡಿಯಷ್ಟೇ ಸ್ಪಷ್ಟವಾಗಿದೆ. ತಕ್ಷಣ ಮುಖ್ಯಮಂತ್ರಿ ಅವರು ವಸತಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಅವರು ಹೇಳಿದ್ದಾರೆ. ಆದರೆ ಬಡವರಿಗಾದ ಅನ್ಯಾಯ ಸಹಿಸುವುದಿಲ್ಲ ಎಂದು ಸಿಎಂ ಹೇಳುತ್ತಾರೆ, ನಿಗಮದ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ಮಾಡುತ್ತಾರೆ, ತಮ್ಮ ತಾಕತ್ತು ತೋರಿಸುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವರು ಹಾಗೇ ಮಾಡಿಲ್ಲ, ಅವರ ಈ ನಿರ್ಲಿಪ್ತತೆ ಸರಿಯಲ್ಲ ಎಂದರು. ಈ ಹಗರಣದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ, ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದರು.


