ಈ ಹಿಂದೆ ಮಾಡಿಸಿದ ಕಾಂತರಾಜ್ ವರದಿಯನ್ನು ಕಸದ ಬುಟ್ಟಿಗೆ ಎಸೆದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕೆ ಮಾಡಿದ್ದಾರೆ.

ಬೆಂಗಳೂರು (ಜು.27): ಈ ಹಿಂದೆ ಮಾಡಿಸಿದ ಕಾಂತರಾಜ್ ವರದಿಯನ್ನು ಕಸದ ಬುಟ್ಟಿಗೆ ಎಸೆದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಯೋಗ್ಯತೆಯೇ ಇಲ್ಲ. ಈ ಹಿಂದೆ ಮಾಡಿಸಿದ ಕಾಂತರಾಜ್ ವರದಿಯನ್ನ ಕಸದ ಬುಟ್ಟಿಗೆ ಎಸೆದಿದ್ದು ಇದೇ ಕಾಂಗ್ರೆಸ್ ಸರ್ಕಾರ. ಈಗ ಅದು ಕಳೆದು ಹೋಗಿದ್ದು, ಪತ್ತೆ ಇಲ್ಲ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಈಗ ನಿಯಮ ಬದ್ಧವಾಗಿ ಜಾತಿ ಗಣತಿ ಮಾಡಲು ಮುಂದಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಷ್ಟು ವರ್ಷ ಅಧಿಕಾರದಲ್ಲಿದ್ದರೂ ಏಕೆ ಜಾತಿ ಗಣತಿ ಮಾಡಲಿಲ್ಲ? ಸುಮ್ಮನೆ ಜಾತಿ ಗಣತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಕೇಂದ್ರವೇ ಜಾತಿ ಗಣತಿ ಮಾಡುವಾಗ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ: ಹಗರಣಗಳ ಸುಳಿಯಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಟೀಕಿಸಿದ್ದಾರೆ.ಅವರು ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು ಪ್ರತಿನಿತ್ಯ ಒಂದಲ್ಲಾ ಒಂದು ಹಗರಣಗಳ ಸುಳಿಯಲ್ಲಿ ಸಿಲುಕುತ್ತಿದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಬಹುತೇಕ ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರ್ಕಾರದ್ದು ಎಂದರು.

ಕೊಡಗಿನಲ್ಲಿ ನಾವು ಎರಡು ಶಾಸಕರನ್ನು ಕಳೆದು ಕೊಂಡಿದ್ದೇವೆ. ಆದರೆ ಆಡಳಿತ ಪಕ್ಷದಿಂದ ಗೆದ್ದಿರುವ ಶಾಸಕರಿಗೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲವೆಂದರು.ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗಿನ ರಸ್ತೆಗಳು ಹೇಗಿದ್ದವು, ಈಗ ಹೇಗಿದೆ, ರಸ್ತೆಗಳ ಅಭಿವೃದ್ಧಿ ಮಾಡಬೇಕಾಗಿದ್ದು ರಾಜ್ಯ ಸರ್ಕಾರದ ಹೊಣೆ ಎಂದರು. ರಾಜ್ಯ ಸರ್ಕಾರದ ದುರಾಡಳಿತವನ್ನು ಖಂಡಿಸಬೇಕಾಗಿದ್ದು, ಪ್ರತಿಭಟಿಸಬೇಕಾಗಿದ್ದು ನಮ್ಮೆಲ್ಲರ ಹೊಣೆಯಾಗಿದೆ. ಇಂತಹ ಸರ್ಕಾರವನ್ನು ಅಂತ್ಯಗೊಳಿಸಿ ಮುಂದೆ ಸುಭಿಕ್ಷ ಹಾಗೂ ಜನಪರವಾದ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ. ಪಿ. ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಕಾಳಪ್ಪ , ನಿಕಟ ಪೂರ್ವ ಅಧ್ಯಕ್ಷ ಭಾರತೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಪಿ.ಎಂ. ರವಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.