ರಾಜ್ಯ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ದತ್ತಪೀಠದ ವಿಚಾರದಲ್ಲಿ ನ್ಯಾಯ ನೀಡಲು ಹೆಜ್ಜೆ ಇಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ಚಿಕ್ಕಮಗಳೂರು (ಡಿ.04): ರಾಜ್ಯ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ದತ್ತಪೀಠದ ವಿಚಾರದಲ್ಲಿ ನ್ಯಾಯ ನೀಡಲು ಹೆಜ್ಜೆ ಇಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ದತ್ತ ಜಯಂತಿ ಹಿನ್ನೆಲೆಯಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿ, ಜಿಲ್ಲಾಡಳಿತ ತನಗಿರುವ ಇತಿಮಿತಿಗಳಲ್ಲಿ ಪೂರಕ ವ್ಯವಸ್ಥೆ ಕೈಗೊಂಡಿದೆ. ಆದರೆ, ಹಿಂದೂಗಳಿಗೆ ಅರ್ಧ ನ್ಯಾಯ ದೊರೆತಿದ್ದು, ಪೂರ್ಣ ನ್ಯಾಯಕ್ಕೆ ನೆರವಾಗುವಂತೆ ಮುಖ್ಯಮಂತ್ರಿ ಅವರಲ್ಲಿ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಮೈಸೂರು ದಾಖಲೆ ಪರಿಶೀಲಿಸಿ: ನಾವು ದತ್ತಪೀಠವೇ ಬೇರೆ, ಬಾಬಾಬುಡನ್‌ಗಿರಿಯೇ ಬೇರೆ ಎಂದು ದಾಖಲೆಗಳ ಆಧಾರದಲ್ಲಿ ಹೇಳುತ್ತಿದ್ದೇವೆ. ಇದಕ್ಕಾಗಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಮೈಸೂರು ಮಹಾರಾಜರ ಪತ್ರಾಗಾರಗಳಲ್ಲಿರುವ ದಾಖಲೆಗಳನ್ನು ಪರಿಶೀಲಿಸಬಹುದು. ಬಾಬಾಬುಡನ್‌ಗಿರಿ ಮತ್ತು ದತ್ತಪೀಠ ಒಂದೇ ಎಂದು ಕೆಲವರು ಇಲ್ಲಿ ಬರುವ ಹರಕೆ ಕಾಣಿಕೆಗಳನ್ನು ಲಪಟಾಯಿಸಲು ವಾದಿಸಿದ್ದಾರೆ. ಐದು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ತಕ್ಷಣವೇ ನ್ಯಾಯ ಪಡೆಯಲು ಸಾಧ್ಯವಿಲ್ಲ.

ಸಾವಿರಾರು ವರ್ಷಗಳ ಇತಿಹಾಸ

ಆದ್ದರಿಂದ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯದ ಹೊರಗೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು ಎಂದು ಸಿ.ಟಿ.ರವಿ ಹೇಳಿದರು. ದತ್ತಾತ್ರೇಯ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದು ಒಂದು ರೀತಿ ಅವಧೂತ ತತ್ವವೂ ಹೌದು. ಪ್ರಾಪಂಚಿಕ ವ್ಯವಹಾರದಲ್ಲಿ ಇದ್ದರೂ ಸಹ ಒಂದು ರೀತಿಯಲ್ಲಿ ಎಲ್ಲದಕ್ಕಿಂತಲೂ ಮುಕ್ತವಾಗಿ ಆಧ್ಯಾತ್ಮಿಕ ಆದರ್ಶದ ಪಾಲನೆ ಮಾಡುವುದು ದತ್ತಾತ್ರೇಯ ಪರಂಪರೆ ಎಂದು ತಿಳಿಸಿದರು.