‘ನನಗೆ ಇನ್ನೂ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ಕೆ.ಎನ್‌. ರಾಜಣ್ಣ ಅವರಿಗೆ ಟಾಂಗ್‌ ನೀಡಿದ್ದಾರೆ.

ನವದೆಹಲಿ (ಡಿ.25): ‘ನನಗೆ ಇನ್ನೂ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಟಾಂಗ್‌ ನೀಡಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ ಎಂಬ ವಿಷಯವಾಗಿ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ ಎಂದು ಟಾಂಗ್‌ ನೀಡಿದರು.

ಅಧಿಕಾರ ಹಸ್ತಾಂತರದ ಬಗ್ಗೆ ನಿಮ್ಮ ಬಳಿ ಚರ್ಚೆ ಆಗಿತ್ತಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಜೊತೆ ಆಗಿರುವ ಎಲ್ಲಾ ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಾವೆಲ್ಲಾ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಒಟ್ಟಾಗಿ ಇರುತ್ತೇವೆ. ಉಹಾಪೋಹಗಳು ಮಾಧ್ಯಮದಲ್ಲೂ ಇವೆ, ನಮ್ಮಲ್ಲೂ ಇವೆ. ನಾನು ಯಾರ ಭೇಟಿಗೂ ಅವಕಾಶ ಕೇಳಿಲ್ಲ. ಯಾವುದೇ ಹುದ್ದೆಗಿಂತ ಹೆಚ್ಚಾಗಿ ನಾನು ಪಕ್ಷದ ಕಾರ್ಯಕರ್ತನಾಗಿ ಇರಲು ಇಷ್ಟಪಡುತ್ತೇನೆ. ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ನೋಡುವುದೇ ನನ್ನ ಆಸೆ ಎಂದರು. ಮೈಸೂರಿನ ಅಹಿಂದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಸಮಾವೇಶ ಮಾಡುವವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕೇಂದ್ರ ಸಚಿವರಿಗೆ ಮೆಟ್ರೋ, ಆರ್‌ಆರ್‌ಟಿಎಸ್ ಯೋಜನೆಗಳಿಗೆ ಮನವಿ: ಮೆಟ್ರೋ 3ಎ ಯೋಜನೆ, ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಯೋಜನೆ ಸಂಬಂಧ ಕೇಂದ್ರ ಸಚಿವಾಲಯದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ನೀಡಿದರೆ ಕೆಲಸ ಆರಂಭಿಸುವುದಾಗಿ ಸಚಿವರಿಗೆ ತಿಳಿಸಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆಗೆ ಮನವಿ ಮಾಡಲಾಗಿದೆ. ಬಿಡದಿ-ಮೈಸೂರು, ಹಾರೋಹಳ್ಳಿ-ಕನಕಪುರ, ನೆಲಮಂಗಲ-ತುಮಕೂರು, ವಿಮಾನ ನಿಲ್ದಾಣ-ಚಿಕ್ಕಬಳ್ಳಾಪುರ, ಹೊಸಕೋಟೆ-ಕೋಲಾರ ಮಧ್ಯೆ ಈ ಸಂಚಾರ ವ್ಯವಸ್ಥೆ ನಿರ್ಮಿಸಲು ಡಿಪಿಆರ್ ತಯಾರಿಸಲು ಮನವಿ ಮಾಡಿದ್ದೇವೆ. ಬೆಂಗಳೂರಿ ದಟ್ಟಣೆ ಹಾಗೂ ಒತ್ತಡ ಕಡಿಮೆ ಮಾಡಲು ಈ ಭಾಗದಲ್ಲಿ ಸ್ಯಾಟಲೈಟ್ ಟೌನ್ ನಿರ್ಮಿಸಬೇಕು ಎಂದು ಈ ಯೋಜನೆಗೆ ಮನವಿ ಮಾಡಿದ್ದು, ಇದನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಟನಲ್ ರಸ್ತೆ ರಾಜ್ಯ ಸರ್ಕಾರದ ಯೋಜನೆ

ಟನಲ್ ರಸ್ತೆ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಕೇಳಿದಾಗ, ಟನಲ್ ಯೋಜನೆಗೂ, ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಗೆ ಎರಡು-ಮೂರು ಸಂಸ್ಥೆಗಳು ಬಿಡ್ ಮಾಡಿವೆ. ಟನಲ್ ರಸ್ತೆ ಯೋಜನೆಯನ್ನು ಬಿಲ್ಡ್ -ಆಪರೇಟ್- ಟ್ರಾನ್ಸ್‌ಪೋರ್ಟ್ ಮಾದರಿಯಲ್ಲಿ ಮಾಡಬೇಕಾಗಿದೆ. ಇದು ರಿಸ್ಕ್ ಇರುವ ಯೋಜನೆ ಎಂದು ಗೊತ್ತಿದೆ. ಅವರೇ ಬಂಡವಾಳ ಹಾಕಿ ಈ ಯೋಜನೆ ಮಾಡಬೇಕಿದೆ ಎಂದರು.