ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು (ಜು.18): ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಧರ್ಮಸ್ಥಳದಲ್ಲಿ ನಡೆದ ಅನುಮಾನಾಸ್ಪದ ಸಾವುಗಳ ಘಟನೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಅವರು, ಇದು ಅದೇ ರೀತಿ ಒಬ್ಬ ವ್ಯಕ್ತಿ ಬಂದು ಸ್ವ ಇಚ್ಚ ಹೇಳಿಕೆ ಕೊಟ್ಟಿದ್ದಾನೆ. ನಾನು ಧರ್ಮಸ್ಥಳದಲ್ಲಿ ಎಷ್ಟೊ ಶವಗಳನ್ನ ಹುತ್ತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಏನು ವರದಿ ಕೊಡುತ್ತಾರೆ ನೋಡೊಣಾ. ಆ ವರದಿ ಆಧಾರದ ಮೇಲೆ ನಾವು ಮುಂದಿನ ಕ್ರಮ ಹೇಳುತ್ತೇವೆ. ಈಗಲೇ ಯಾರೋ ಹೇಳಿದರು ಎಂದು ಏನೇನೊ ಘೋಷಣೆ ಮಾಡಲು ಸಾಧ್ಯವಿಲ್ಲ. ಧರ್ಮಸ್ಥಳದ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡ ಇಲ್ಲ. ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ ಎಂದು ಹೇಳಿದರು.

ಮುಂದಿನ ಸಭೆಯಲ್ಲಿ ತೀರ್ಮಾನ: ಆರ್‌ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುನ್ಹಾ ಅವರು ವರದಿ ಕೊಟ್ಟಿದ್ದಾರೆ. ಆ ವರದಿ ಸಂಪುಟದಲ್ಲಿ ಮಂಡಣೆಯಾಗಿದೆ. ಆದರೆ ಈ ಬಗ್ಗೆ ಚರ್ಚೆ ಆಗಿಲ್ಲ. ಆ ವರದಿಯ ಮುಖ್ಯ ಅಂಶಗಳನ್ನ ಸಚಿವರಿಗೆ ಕೊಟ್ಟಿದ್ದೇವೆ. ಮುಂದಿನ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ‌ ಎಂದು ತಿಳಿಸಿದರು.

ಬಿಜೆಪಿಯಿಂದ ಯಾವ ಅಭಿವೃದ್ಧಿ ಇಲ್ಲ: ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಉತ್ತರ ನೀಡಲು ನಾವು ಸಮಾವೇಶ ಮಾಡುತ್ತಿದ್ದೇವೆ‌. ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ.. ನಾವು ಸಾವಿರಾರು ಕೋಟಿ ಹಣವನ್ನ ಒಂದೇ ನಗರಕ್ಕೆ ಮಂಜೂರು ಮಾಡಿದ್ದೇವೆ. ಇದನ್ನು ಜನರಿಗೆ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಬಿಜೆಪಿಯಿಂದ ಯಾವ ಅಭಿವೃದ್ಧಿಯೂ ಆಗಿಲ್ಲ. ಇದು ಸಾಧನ ಸಮಾವೇಶ ಹೊರತು ಶಕ್ತಿ ಸಮಾವೇಶ ಅಲ್ಲ ಎಂದು ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ದಲಿತರನ್ನ ಪ್ರಧಾನ ಮಂತ್ರಿ ಮಾಡಲು ಹೇಳಲಿ: ದಲಿತರಿಗೆ ನಾಯಕತ್ವ ವಿಚಾರ‌ವಾಗಿ ಮಾತನಾಡಿದ ಸಿಎಂ, ಕಾಂಗ್ರೆಸ್ ಮಾತ್ರ ಸಂವಿಧಾನದ ಆಶಯ ಎತ್ತಿ ಹಿಡಿದು ದಲಿತರಿಗೆ ನ್ಯಾಯ ಕೊಟ್ಟಿದೆ. ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗ ನರೇಂದ್ರ ಮೋದಿ ಬದಲು ಬೇರೊಬ್ಬ ದಲಿತರನ್ನ ಪ್ರಧಾನ ಮಂತ್ರಿ ಮಾಡಲು ಹೇಳಲಿ. ವಿಜಯೇಂದ್ರ‌ ಅವರೇ ತಮ್ಮ ಅಧ್ಯಕ್ಷ ಸ್ಥಾನವನ್ನ ದಲಿತರಿಗೆ ಬಿಟ್ಟು ಕೊಡಲಿ ಎಂದು ವಾಗ್ದಾಳಿ ನಡೆಸಿದರು.

ನೂತನ ಕಾನೂನು ಜಾರಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ವಿಚಾರವಾಗಿ, ಇದು ನನ್ನ ಗಮನಕ್ಕೂ ಬಂದಿದೆ. ಇದೊಂದು ಹುಸಿ ಬಾಂಬ್ ಕರೆ ಇರಬಹುದು ಅಂತಾ ಪರಿಶೀಲನೆ ನಡೆಯುತ್ತಿದೆ. ಹುಸಿ ಬಾಂಬ್ ಕರೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ನೂತನ ಕಾನೂನು ಜಾರಿ ಮಾಡುತ್ತೇವೆ ಜೊತೆಗೆ ಸುಳ್ಳು ಹೇಳಿಕೆ ಪ್ರಚೋದನಾ ಭಾಷಣ ತಡೆಗೂ ಕಾನೂನು ರೂಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.