ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರಿದ್ದಾರಂತಹ ದೇಶದಲ್ಲಿ ಹಿಂದೂಗಳು ಸದರ ಆಗಿದ್ದಾರೆ. ಕರ್ನಾಟಕದಲ್ಲಂತೂ ಸಾಬರ ಸರ್ಕಾರವಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ ಆರೋಪಿಸಿದರು.
ಬಾಗಲಕೋಟೆ (ಆ.11): ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಮ್ಯುನಿಸ್ಟರಿಗೆ ಬೆಂಬಲ ಕೊಡುವ ಮುಖ್ಯಮಂತ್ರಿ ಸಿಕ್ಕಿರುವುದು ಈ ರಾಜ್ಯದ ದೌರ್ಭಾಗ್ಯ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೃಪಾಪೋಷಿತ ಎಸ್ಐಟಿ ಇದಾಗಿದೆ. ಅವರಿಗೆ ಏನೂ ಸಿಗುತ್ತಿಲ್ಲ. ಅವನು ಯಾವನೋ ಒಬ್ಬ ಮುಖವಾಡದ ವ್ಯಕ್ತಿ ಮಾತುಕೇಳಿ, ಎಸ್ಐಟಿ ನೇಮಿಸಿ, ಐಜಿಪಿ ಲೇವಲ್ ಅಧಿಕಾರಿ ಅಲ್ಲಿ ಕೂತು. ಹಿಂದುಗಳನ್ನು ಅಪಮಾನ ಮಾಡೋದನ್ನು ಗಮನಿಸಿದರೆ ದೇಶದಲ್ಲಿ ಹಿಂದುಗಳ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.
ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರಿದ್ದಾರಂತಹ ದೇಶದಲ್ಲಿ ಹಿಂದೂಗಳು ಸದರ ಆಗಿದ್ದಾರೆ. ಕರ್ನಾಟಕದಲ್ಲಂತೂ ಸಾಬರ ಸರ್ಕಾರವಾಗಿದೆ ಎಂದು ಆರೋಪಿಸಿದ ಅವರು, ಧರ್ಮಸ್ಥಳದಲ್ಲಿ ಎಸ್‌ಡಿಪಿಐನವರಿಗೆ ಏನು ಕೆಲಸ? ಅವರು ದೇಶ ದ್ರೋಹಿಗಳು. ಅವರ್ಯಾಕೆ ಪ್ರತಿಭಟನೆ ಮಾಡುತ್ತಾರೆ, ಅಲ್ಲಿ ಏನೂ ಸಿಕ್ಕಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಅಪಮಾನ ಮಾಡಬೇಕು. ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಡಿದರು. ಶನಿ ಸಿಂಗನಾಪುರದಲ್ಲಿ ಮಾಡಿದರು. ಇವತ್ತು ಧರ್ಮಸ್ಥಳ, ನಾಳೆ ವೀರಭದ್ರೇಶ್ವರ, ವೆಂಕಟೇಶ್ವನದು ಮುಗಿದಿದೆ. ಈಗ ಅಲ್ಲಿಯೂ ಹುಂಡಿಯೊಳಗೆ ಏನೋ ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ ಎಂದರು.
ಗವಿಸಿದ್ದಪ್ಪನ ಮನೆಗೆ ಯತ್ನಾಳ, ಈಶ್ವರಪ್ಪ ಭೇಟಿ: ನಗರದ ವಾರ್ಡ್ 3ರಲ್ಲಿ ಕಳೆದ ಭಾನುವಾರ ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಮಸೀದಿ ಮುಂಭಾಗದಲ್ಲಿ ಕೊಲೆಯಾಗಿದ್ದ ಹಿಂದೂ ಯುವಕ ಗವಿಸಿದ್ದಪ್ಪನ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗವಿಸಿದ್ದಪ್ಪನ ತಂದೆ ನಿಂಗಜ್ಜ, ತಾಯಿ ದೇವಮ್ಮ ಕೊಲೆಯಾದ ತಮ್ಮ ಮಗ ಗವಿಸಿದ್ದಪ್ಪ ಯತ್ನಾಳ ಜತೆ ತೆಗೆಸಿಕೊಂಡ ಫೋಟೋ ತೋರಿಸಿದರು. ಅಲ್ಲದೆ ವಾಟ್ಸ್‌ಆ್ಯಪ್ ಡಿಪಿಗೆ ಯತ್ನಾಳ ಜತೆಯಿದ್ದ ಪೋಟೋ ಇಟ್ಟುಕೊಂಡಿದ್ದನ್ನು ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮುಂದೆ ಗವಿಸಿದ್ದಪ್ಪ ಯತ್ನಾಳ ಜತೆಗಿರುವ ಪೋಟೋ ಹಿಡಿದುಕೊಂಡು ಗವಿಸಿದ್ದಪ್ಪ ಪೋಷಕರು ಕುಳಿತಿದ್ದರು. ಗವಿಸಿದ್ದಪ್ಪ ನಿಮ್ಮ ಅಭಿಮಾನಿಯಾಗಿದ್ದ ಸರ್ ಎಂದು ಯತ್ನಾಳ ಅವರಿಗೆ ಹೇಳಿದರು. ಯತ್ನಾಳ ಜತೆ ಇದ್ದ ಫೋಟೋ ತೋರಿಸಿ ನ್ಯಾಯ ಕೊಡಿಸಬೇಕು ಎಂದು ಕಣ್ಣೀರು ಹಾಕಿದರು. ನಮ್ ಮಗನನ್ನು ಮಸೀದಿ ಮುಂದೆ ಕೊಲೆ ಮಾಡ್ಯಾರ. ಕೊಲೆ ಮಾಡಿ ನಮಾಜ್ ಸಹ ಮಾಡಿದ್ದಾರೆ ರೀ ಎಂದು ಆಕ್ರೋಶ ವ್ಯಕ್ತಪಡಿಸಿದರು ಒಂದು ವರ್ಷದಿಂದ ಪ್ರೀಪ್ಲ್ಯಾನ್ ಮಾಡಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ವಾಟ್ಸ್‌ಆ್ಯಪ್‌ಗೆ ನಿಮ್ಮ ಫೊಟೋ ಹಾಕಿಕೊಂಡಿದ್ದ ಸರ್ ಎಂದು ಯತ್ನಾಳಗೆ ಗವಿಸಿದ್ದಪ್ಪ ತಂದೆ ತೋರಿಸಿದರು.


