ಗೃಹಲಕ್ಷ್ಮೀ ಯೋಜನೆ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್‌ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಿ. ಅದಕ್ಕೂ ಮೊದಲು ನರೇಗಾ ಹಣ, ನೀರಾವರಿ, ಜಲಜೀವನ್‌ ಮಿಷನ್‌ ಕೇಂದ್ರದಿಂದ ಬಂದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುವರ್ಣ ವಿಧಾನಸೌಧ (ಡಿ.18): ಗೃಹಲಕ್ಷ್ಮೀ ಯೋಜನೆ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್‌ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಿ. ಅದಕ್ಕೂ ಮೊದಲು ನರೇಗಾ ಹಣ, ನೀರಾವರಿ, ಜಲಜೀವನ್‌ ಮಿಷನ್‌ ಕೇಂದ್ರದಿಂದ ಬಂದಿಲ್ಲ. ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು ಅದಕ್ಕೆ ಉತ್ತರಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪಂಚ ಗ್ಯಾರಂಟಿಗಳು ಸೇರಿ ನಮ್ಮ ಕೈ ಗಟ್ಟಿಯಾಗಿದೆ. ಒಂದು ರುಪಾಯಿ ಕೂಡ ಭ್ರಷ್ಟಾಚಾರ ಇಲ್ಲದೆ ಫಲಾನುಭವಿಗಳಿಗೆ ಹಣ ನೀಡುತ್ತಿದ್ದೇವೆ.

ಬಿಜೆಪಿಯವರು ಅನಗತ್ಯವಾಗಿ ವಿವಾದ ಮಾಡುತ್ತಿದ್ದು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹಣ ತಿಂದುಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ನಮಗೆ ಕೇಂದ್ರದಿಂದ ಬರಬೇಕಾಗಿದ್ದ ನರೇಗಾ ಹಣ ಬಂದಿಲ್ಲ. ನೀರಾವರಿ ಹಣ ಬಂದಿಲ್ಲ. ಜಲಜೀವನ್ ಮಿಷನ್‌ ಹಣ ಬಂದಿಲ್ಲ. ಜಿಎಸ್ಟಿಯಿಂದ 15,000ಕೋಟಿ ರು. ನಷ್ಟ ಉಂಟಾಗಿದೆ. ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು ಇದರ ಬಗ್ಗೆ ಮಾತನಾಡಲಿ ಎಂದು ಕಿಡಿ ಕಾರಿದರು.

ಅನಗತ್ಯ ವಿವಾದ ಮಾಡುವ ಅಗತ್ಯವಿಲ್ಲ. ಪಂಚ ಗ್ಯಾರಂಟಿ ಹಣ ಜನರಿಗೆ ನೀಡಲು ನಾವು ಬದ್ಧ. ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಗುತ್ತಿಗೆದಾರರ ಬಿಲ್‌ಗಳು 3 ವರ್ಷವಾದರೂ ಕೊಟ್ಟಿಲ್ಲ. ಅವರು ಕೆಲಸ ಮಾಡುತ್ತಿಲ್ಲವೇ ಎಂದು ಶಿವಕುಮಾರ್‌ ಪ್ರಶ್ನಿಸಿದರು. ಸಂಬಂಧಪಟ್ಟ ಸಚಿವರು ಕಾಣೆಯಾಗಿದ್ದಾರೆ ಎಂದು ಟ್ರೋಲ್‌ ಮಾಡುತ್ತಿರುವ ಬಗ್ಗೆ ಮಾತನಾಡಿದ ಶಿವಕುಮಾರ್ ಅವರು, ‘ಸಚಿವರು ಎಲ್ಲೂ ಹೋಗಿಲ್ಲ, ವಿಧಾನಸೌಧದಲ್ಲೇ ಇದ್ದಾರೆ. ಅವರದ್ದು ಇದೇ ಕ್ಷೇತ್ರ. ಅವರು ಬಂದಿದ್ದನ್ನು ನಾನೂ ನೋಡಿದ್ದೇನೆ. ಸುಮ್ಮನೆ ಅಪಪ್ರಚಾರ ಮಾಡಬಾರದು.’ ಎಂದರು.

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ

ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನ ಆಶೀರ್ವಾದ ಮಾಡಿ ಕಳಿಸಿದ್ದಾರೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆ ಕೊನೇ ಸಾಲಿನಲ್ಲೇ ಕುಳಿತು ಆಪ್ತ ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು ಮಂಗಳವಾರ ಕುತೂಹಲ ಮೂಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಸಾಲಿನಲ್ಲಿನ ತಮ್ಮ ಕುರ್ಚಿಯಲ್ಲಿ ಆಸೀನರಾಗಿದ್ದರು. ಅವರ ಪಕ್ಕದಲ್ಲಿ ಕುಳಿತಿರಬೇಕಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕೊನೆಯ ಸಾಲಿನಲ್ಲಿ ಹೋಗಿ ಕೂತರು.

ಈ ವೇಳೆ ಮೊದಲಿಗೆ ಲಕ್ಷ್ಮಣ ಸವದಿ, ಗುಬ್ಬಿ ಶ್ರೀನಿವಾಸ್, ನಯನಾ ಮೋಟಮ್ಮ ಅವರೊಂದಿಗೆ ಚರ್ಚಿಸಿದರು. ಬಳಿಕ ಗ್ರೇಟರ್‌ ಬೆಂಗಳೂರು ತಿದ್ದುಪಡಿ ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಡಿ.ಕೆ.ಶಿವಕುಮಾರ್ ಅವರು ಪುನಃ ಕೊನೆಯ ಸಾಲಿಗೆ ತೆರಳಿದರು. ಬಳಿಕ ಮಾಗಡಿ ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಡಿ.ಸುಧಾಕರ್‌, ಇಕ್ಬಾಲ್‌ ಹುಸೇನ್‌, ಕದಲೂರು ಉದಯ್‌, ಅಶೋಕ್‌ ರೈ ಅವರ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಮುಖ್ಯಮಂತ್ರಿಗಳು ಸದನದಲ್ಲಿ ಉಪಸ್ಥಿತರಿದ್ದಾಗಲೇ ಆಪ್ತ ಶಾಸಕರೊಂದಿಗೆ ಪ್ರತ್ಯೇಕವಾಗಿ ಕುಳಿತು ಶಿವಕುಮಾರ್‌ ಅವರು ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.