ಚುನಾವಣಾ ಆಯೋಗದ ಕ್ರಮವನ್ನು ಖಂಡಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದರು.

ವಿಧಾನಪರಿಷತ್‌ (ಆ.20): ವಿದ್ಯುನ್ಮಾನ ಮತಯಂತ್ರ (ಇವಿಎಂ) ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಮತದಾನ ಮಾಡಲಾಗುತ್ತಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಯನ್ನು ಬೆಂಬಲಿಸದ ಸಮುದಾಯಗಳ ಮತದಾರರನ್ನು ಮತದಾರರ ಪಟ್ಟಿಯಿಂದ ಬಿಜೆಪಿ ತೆಗೆದು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದರು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಚುನಾವಣಾ ಅಕ್ರಮ ಕುರಿತಂತೆ ‘ಎದ್ದೇಳು ಕರ್ನಾಟಕ’ ಸಂಘಟನೆ ಆಯೋಜಿಸಿದ್ದ ದುಂಡು ಮೇಜಿನ ಸಂವಾದದಲ್ಲಿ ಮಾತನಾಡಿದವರು ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಶೇ. 58.22ರಷ್ಟು ಮತದಾನವಾಗಿತ್ತು.

ಮಧ್ಯರಾತ್ರಿ ಹೊತ್ತಿಗೆ ಶೇ.66.05ರಷ್ಟು ಮತದಾನವಾಗಿದೆ ಎಂದು ಆಯೋಗ ಘೋಷಿಸಿದೆ. ಹೆಚ್ಚುವರಿಯಾಗಿ 48 ಲಕ್ಷ ಮತಗಳು ಎಲ್ಲಿಂದ ಸೇರ್ಪಡೆಯಾದವು ಎಂದು ಪ್ರಶ್ನಿಸಿದ್ದಾರೆ ಎಂದರು. ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ಬಿಜೆಪಿ ಮೈತ್ರಿಕೂಟ ಸುಮಾರು ಮೂರು ಸಾವಿರ ಮತಗಳ ಅಂತರದಿಂದ 25 ಕ್ಷೇತ್ರ, ಐದು ಸಾವಿರ ಮತಗಳ ಅಂತರದಿಂದ 39 ಕ್ಷೇತ್ರ ಹಾಗೂ 10 ಸಾವಿರ ಮತಗಳ ಅಂತರದಿಂದ 69 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಚುನಾವಣಾ ಆಯೋಗ ಉತ್ತರಿಸಲಿಲ್ಲ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಇದೇ ರೀತಿ ಆಗುವ ಆತಂಕ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕ್ರಮವನ್ನು ಸದನ ಖಂಡಿಸಬೇಕು. ಈ ಸಂಬಂಧ ಸರ್ಕಾರ ನಿರ್ಣಯಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದರು.