ದೇಶದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಲಕ್ಷಾಂತರ ಜನರ ಹಸಿವು ತಪ್ಪಿಸಿ ಬಡತನದ ವ್ಯಾಪಕ ನಿರ್ಮೂಲನೆಯಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

ಬೆಂಗಳೂರು (ಅ.10): ದೇಶದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಲಕ್ಷಾಂತರ ಜನರ ಹಸಿವು ತಪ್ಪಿಸಿ ಬಡತನದ ವ್ಯಾಪಕ ನಿರ್ಮೂಲನೆಯಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ. ಬೆಂಗಳೂರು ಕೃಷಿ ವಿವಿಯ ಕೊಡುಗೆಯೂ ಇದರಲ್ಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

ಹೆಬ್ಬಾಳದ ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ 60ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರದ ನವೀಕರಿಸಿದ ಕಟ್ಟಡ ಮತ್ತು ಸೂಕ್ಷ್ಮ ನೀರಾವರಿ ಪರಿಕರಗಳ ಗುಣಮಟ್ಟ ಪರೀಕ್ಷಣ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ 75 ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ 11ನೇ ಸ್ಥಾನದಲ್ಲಿದ್ದು ನ್ಯಾಕ್ ಸಂಸ್ಥೆಯಿಂದ ‘ಎ’ ಪ್ಲಸ್ ಶ್ರೇಣಿ ಪಡೆದುಕೊಂಡಿದೆ. ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನ ದೊರಕಿದೆ. ಈ ಎಲ್ಲ ಸಾಧನೆಗಳು ಕೃಷಿ ವಿವಿಯು 60 ವರ್ಷಗಳಲ್ಲಿ ಯಾವ ರೀತಿ ನಡೆದು ಬಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ವೆಬ್‌ಪೋರ್ಟಲ್‌ ಅನಾವರಣ

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿದರು. ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕನ್ನಡದ ಮೂರು ಪುಸ್ತಕಗಳನ್ನು ಮತ್ತು ಕೃಷಿ ವಿವಿ ವೆಬ್‌ಪೋರ್ಟಲ್‌ ಅನ್ನು ಅನಾವರಣಗೊಳಿಸಿದರು. ವಿವಿಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಮತ್ತು ಬೋಧಕೇತರ ಸಿಬ್ಬಂದಿಯ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ 96 ವಿಭಿನ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ್‌, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ.ಮಂಗಿಲಾಲ್‌ ಜಾಟ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಕೆ.ಸಿ.ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.