ಕಾಂಗ್ರೆಸ್ಸಿಗರು ಆಡಳಿತ ನಡೆಸುತ್ತಿದ್ದಾಗ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಈಗ ನೋಡಿದರೆ ಕಾಂಗ್ರೆಸ್ಸಿಗರು ಇಷ್ಟು ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಡಿ.25): ಕಾಂಗ್ರೆಸ್ಸಿಗರು ಆಡಳಿತ ನಡೆಸುತ್ತಿದ್ದಾಗ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಗಾಂಧಿ ಅವರ ಬಗ್ಗೆ ಇಷ್ಟೊಂದು ಕಾಳಜಿ-ಕಳಕಳಿ ಇರುವವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆಳ್ವಿಕೆ ಮಾಡಿದ ಸಂದರ್ಭದಲ್ಲಿ ಎಲ್ಲಿಯಾದರೂ ಗಾಂಧೀಜಿ ಅವರ ಒಂದು ಪೋಸ್ಟರ್ ನೋಡಿದೀರಾ, ಎಲ್ಲಿಯಾದರೂ ಮಹಾತ್ಮಾ ಗಾಂಧಿ ಅವರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಿದ್ದಾರಾ ಎಂದು ಕಿಡಿಕಾರಿದರು.

ಈಗ ನೋಡಿದರೆ ಕಾಂಗ್ರೆಸ್ಸಿಗರು ಇಷ್ಟು ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕದ ಗ್ಯಾರಂಟಿ ಬಿಹಾರದವರೆಗೂ ಹೋಯಿತು. ಅಲ್ಲಿ ವರ್ಕ್ ಆಗಲಿಲ್ಲ. ಮೋದಿ ಅವರಿಗೆ ದೇಶ ನಡೆಸಲು ಗೊತ್ತು. ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂಬುದು ಅವರಿಗೆ ಗೊತ್ತು. ಯಾವ ರಾಜ್ಯ ಹೇಗೆಲ್ಲಾ ಹಣ ಖರ್ಚು ಮಾಡುತ್ತಿದೆ ಎಂಬುದೂ ಅವರಿಗೆ ಗೊತ್ತು. ನಾನೇನು ಮೋದಿ ಅವರನ್ನು ಹೊಗಳಲು ಬಂದಿಲ್ಲ ಎಂದರು. ನರೇಗಾಗೆ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಕೆಲಸದ ದಿನಗಳನ್ನು ಹೆಚ್ಚು ಮಾಡಿದ್ದಾರೆ. ರಾಮನ ಹೆಸರು ಇಟ್ಟುಕೊಂಡಿದ್ದಾರೆ ಅಂತಾರೆ. ನಮ್ಮ ಮನೆಗೆ ಬನ್ನಿ, ರಾಮ, ಕೃಷ್ಣ, ವೆಂಕಟೇಶ್ವರ ಎಲ್ಲರ ಫೋಟೋಗಳು ಇವೆ. ರಾಮ ಪುರುಷೋತ್ತಮ ಅಂತ ವಾಲ್ಮೀಕಿ ಹೇಳಿದ್ದಾರೆ. ಇದರ ಬಗ್ಗೆ ಇಷ್ಟು ಜಿಜ್ಞಾಸೆ ಯಾಕೆ? ಎಂದು ಗೌಡರು ಹೇಳಿದರು.

ಜನವರಿ ತಿಂಗಳಲ್ಲಿ ಎರಡು ಸಮಾವೇಶ

ಪಕ್ಷ ಸಂಘಟನೆ ಸಂಬಂಧ ಬರುವ ಜ.23 ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ತಲಾ ಒಂದು ಪಕ್ಷದ ಸಮಾವೇಶ ನಡೆಸಲಾಗುವುದು ಎಂದು ಇದೇ ವೇಳೆ ದೇವೇಗೌಡರು ತಿಳಿಸಿದರು. ಈ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೂ ಹೇಳಿದ್ದೇನೆ. ರಾಜ್ಯ ಸರ್ಕಾರದ ವೈಫಲ್ಯಗಳು ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಹಾಸನ ಜಿಲ್ಲೆಯಲ್ಲಿ ಎರಡು ಸಮಾವೇಶಗಳನ್ನು ಮಾಡಿದ್ದಾರೆ. ದೇವೇಗೌಡರ ತವರು ಜಿಲ್ಲೆಯನ್ನು ಮುಗಿಸಬೇಕು ಎಂಬ ಉದ್ದೇಶವಿದೆಯೋ ಏನೋ ಗೊತ್ತಿಲ್ಲ. ನನಗೆ ನಡೆಯಲು ಆಗುವುದಿಲ್ಲ, ಆದರೆ ಪ್ರವಾಸ ಮಾಡಲು ತೊಂದರೆಯಿಲ್ಲ ಎಂದು ಗೌಡರು ಹೇಳಿದರು.