ಈ ಸರ್ಕಾರಕ್ಕೆ ಐದು ವರ್ಷದ ಅಧಿಕಾರ ಕೊಟ್ಟಿದ್ದಾರೆ. ನಮಗೆ ಯಾರು ಮುಖ್ಯಮಂತ್ರಿಯಾದರೇನು? ನಮಗೆ ಬೇಕಿರುವುದು ಐದು ವರ್ಷದ ಸುಸ್ಥಿರ ಸರ್ಕಾರ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಾಳೆಹೊನ್ನೂರು (ಡಿ.23): ನಮಗೆ ಬೇಕಿರುವುದು ಕೇವಲ ರಾಜ್ಯದ ಅಭಿವೃದ್ಧಿ. ಈ ಸರ್ಕಾರಕ್ಕೆ ಐದು ವರ್ಷದ ಅಧಿಕಾರ ಕೊಟ್ಟಿದ್ದಾರೆ. ನಮಗೆ ಯಾರು ಮುಖ್ಯಮಂತ್ರಿಯಾದರೇನು? ನಮಗೆ ಬೇಕಿರುವುದು ಐದು ವರ್ಷದ ಸುಸ್ಥಿರ ಸರ್ಕಾರ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಅನಾಹುತವಾಗಿದೆ? ಎಲ್ಲೆಲ್ಲಿ ಸಮಸ್ಯೆಗಳಿದೆ ಅವುಗಳನ್ನು ತಿಳಿಯಬೇಕು. ನಾಡಿನ ಜನತೆ ಹಣವನ್ನು ಲೂಟಿ ಹೊಡೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರ ನಮಗೆ ಬೇಕು ಎಂದರು.

ರಾಜ್ಯದ ಜನರಿಗೆ ಪ್ರತಿನಿತ್ಯ ಮನರಂಜನೆ ನೀಡಲು ಕಾಂಗ್ರೆಸ್ಸಿನವರು ಕುರ್ಚಿ ವಿಚಾರ ಮುನ್ನೆಲೆಗೆ ತಂದಿದ್ದಾರೆ. ರಾಜ್ಯದ ಜನತೆ ಮೇಲೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ನಾವೆಷ್ಟು ತೆರಿಗೆ ಜಾಸ್ತಿ ಹಾಕಬೇಕು ಎಂಬ ಸ್ಪರ್ಧೆಗೆ ಇಳಿದಿದ್ದಾರೆ. ಮುಂದಿನ ಬಜೆಟ್ ನಾನೇ ಮಂಡನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಡಿಕೆಶಿ 45 ದಿನದಲ್ಲಿ ಅವರ ಮುಖ್ಯಮಂತ್ರಿಯಾಗುವ ಆಸೆ ನೆರವೇರುತ್ತೆ ಎಂದು ದೇವರು ಹೇಳಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕತೆಯ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದು. ಅವರಿಗೆ ಸರಿಯಾದವರು ಸಿಕ್ಕಿಲ್ಲ.

ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರಂಪ್ ಅವರಿಗೆ ಆರ್ಥಿಕ ಸಚಿವರಾಗಿ ತೆರಳಲಿ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಬಹಳ ದಾಖಲೆ ಬಜೆಟ್ ಮಂಡನೆ ಮಾಡಿ ಐತಿಹಾಸಿಕ ಅಕ್ಷರಗಳಲ್ಲಿ ಸ್ವತಃ ಅವರೇ ಬರೆದಿಟ್ಟುಕೊಂಡಿದ್ದಾರೆ. ರಾಜ್ಯದ ಆರ್ಥಿಕ ಬಜೆಟ್ ಬಹಳ ಸೀಮಿತವಾದದ್ದು. ಟ್ರಂಪ್ ಇಡೀ ಜಗತ್ತಿಗೆ ತಾರೀಫ್‌ನಲ್ಲಿ ಏನೋ ಮಾಡಬೇಕು ಎಂದು ಹೊರಟಿದ್ದಾರೆ. ತಾರೀಫ್‌ನಲ್ಲಿ ಯಾವ ರೀತಿ ಹೊಸ ಹೊಸ ತೆರಿಗೆ ಹಾಕಬೇಕೆಂದು ಸಿದ್ದರಾಮಯ್ಯ ಬಹಳ ನಿಸ್ಸೀಮರಾಗಿದ್ದಾರೆ. ಪ್ರಸ್ತುತ ಟ್ರಂಪ್ ಒದ್ದಾಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರೇ ತೆರಳಿ ಸಹಕಾರ ಕೊಟ್ಟರೆ ಕರ್ನಾಟಕ ರಾಜ್ಯ ಕ್ಷೇಮವಾಗಿರುತ್ತದೆ ಎಂದು ಲೇವಡಿ ಮಾಡಿದರು.

ಸಿಎಂ ಹೆಲಿಕಾಪ್ಟರ್‌ ವೆಚ್ಚಕ್ಕೆ ಕಿಡಿ

ನನಗೆ ಹುಷಾರಿಲ್ಲದಿದ್ದರೂ ನಾನು ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ನಲ್ಲಿ ಬರಲಿಲ್ಲ. ಇಲ್ಲಿನ ಸಮಸ್ಯೆಗಳನ್ನು ಅರಿಯಬೇಕೆಂದು ರಸ್ತೆ ಮುಖಾಂತರ ಬಂದಿದ್ದೇನೆ. ಇಲ್ಲಿಗೆ ಬರುವ ಮಂತ್ರಿಗಳ್ಯಾರು ರಸ್ತೆ ಮೂಲಕ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಹಾರಾಟಕ್ಕೆ ₹47 ಕೋಟಿ ವೆಚ್ಚ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದು ತಪ್ಪು ಎಂದು ನಾನು ಹೇಳಲ್ಲ. ಆದರೆ ಮುಖ್ಯಮಂತ್ರಿಗೆ ಮಳವಳ್ಳಿಗೆ ಒಂದು ಗಂಟೆ ಪ್ರಯಾಣಕ್ಕೂ ಹೆಲಿಕಾಪ್ಟರ್, ಮೈಸೂರಿನಿಂದ ಚಾಮರಾಜನಗರಕ್ಕೆ ಅರ್ಧ ಗಂಟೆ ಪ್ರಯಾಣಕ್ಕೂ ಕೂಡ ಹೆಲಿಕಾಪ್ಟರ್ ಹಾರಾಟ. ಇದಕ್ಕೆ ಅರ್ಥವಿದೆಯಾ ಎಂದು ಪ್ರಶ್ನಿಸಿದರು.