ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಜತೆಗೆ ಹೊಸದಾಗಿ 3,600 ಪೇದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆ (ಡಿ.10): ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಈಗಾಗಲೆ ಅಭ್ಯರ್ಥಿಗಳ ತರಬೇತಿ ನಡೆಯುತ್ತಿದೆ. ಜತೆಗೆ ಹೊಸದಾಗಿ 3,600 ಪೇದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಉಮಾನಾಥ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಳೆದ ಐದು ವರ್ಷಗಳಿಂದಲೂ ಪಿಎಸ್ಐಗಳ ನೇಮಕಾತಿ ಆಗಿಲ್ಲ. ಈ ಹಿಂದೆ 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ನಡೆದಂಥ ಪ್ರಕರಣವನ್ನು ಬಗೆಹರಿಸಿ, ನೇಮಕಾತಿ ಮಾಡಿದ್ದೇವೆ. ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗಾಗಿ ನಿಯೋಜಿಸಲಾಗಿದೆ. ಮೂರು ತಿಂಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಖಾಲಿ ಇರುವ ಕಡೆ ನಿಯೋಜಿಸಲಾಗುವುದು ಎಂದು ಹೇಳಿದರು.
ಜತೆಗೆ ಪೊಲೀಸ್ ಪೇದೆಗಳ ನೇಮಕಾತಿಗಾಗಿಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 3,600 ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರೆತಿದೆ. ಹೀಗಾಗಿ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಕರಾವಳಿ ಮುಂತಾದೆಡೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯ ಪಡೆ ನೇಮಿಸಿದ್ದೇವೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿ ಜಾರಿ ಮಾಡಿದ್ದೇವೆ.
ನಮ್ಮ ಸರ್ಕಾರ ಬದ್ಧ
ಇದರ ಜೊತೆ ಮಹಿಳೆಯರ ಸುರಕ್ಷತೆಗಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಕ್ಕ-ಪಡೆ ರಚಿಸಲಾಗುತ್ತಿದ್ದು, ಇದೂ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದಲ್ಲಿ ಇದರಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶವನ್ನು ಸುರಕ್ಷಿತ ಪ್ರದೇಶವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

