ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಹಾಯಕರಾಗಿ ಕಾಣುತ್ತಿದ್ದು, ಅವರ ಮೇಲೆ ಯಾರೋ ಮಾಟ-ಮಂತ್ರ ಮಾಡಿಸಿರಬಹುದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಾವೇ ತನಿಖೆ ನಡೆಸುತ್ತಿರುವುದಾಗಿ ಹೇಳಿರುವ ಅವರು, ಮೇ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ 

 ಬೆಂಗಳೂರು (ಏ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟೊಂದು ಅಸಹಾಯಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಯಾರೋ ಮಾಟ, ಮಂತ್ರ ಮಾಡಿಸಿರಬಹುದು. ಇದರ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು. ಟಗರು ಯಾವತ್ತಿದ್ದರೂ ಟಗರೇ ಅವರು ಅಸಹಾಯಕರಾಗಲ್ಲ’ ಎಂಬ ಜಮೀರ್‌ ಅಹ್ಮದ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

‘ನನ್ನ ಅನುಭವದ ಪ್ರಕಾರ ನಾನು ಸಿಎಂ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದೇನೆ. ಅಗಾಧ ಶಕ್ತಿ ಹೊಂದಿರುವ ಸಿಎಂ ಇಷ್ಟೊಂದು ಅಸಹಾಯಕರಾಗಿರುವುದನ್ನು ಎಂದೂ ನೋಡಿರಲಿಲ್ಲ. ಈಗ ನೋಡಿದರೆ ಅವರ ಮೇಲೆ ಯಾರಾದರೂ ಮಾಟ-ಮಂತ್ರ ಮಾಡಿದ್ದಾರೆಯೇ ಎನಿಸುತ್ತದೆ. ಆ ಬಗ್ಗೆ ನಾನು ವಿಚಾರ ಮಾಡುತ್ತಿದ್ದು, ತನಿಖೆ ಮಾಡಿಸುತ್ತಿದ್ದೇನೆ’ ಎಂದರು.

ಸಿಎಂ ಹಾಗೂ ನಾನು ಮಾಟ ಮಂತ್ರದಲ್ಲಿ ನಂಬಿಕೆ ಇಲ್ಲದವರು. ಮನುಷ್ಯರ ಮೇಲೆ ಪರಿಣಾಮ ಆಗಬೇಕು ಎಂದರೆ ಅವರು ಆಸ್ತಿಕರಾಗಿರಬೇಕು ಎಂದೇನೂ ಇಲ್ಲ. ಹೀಗಾಗಿ ಅವರ ಮೇಲೆ ಮಾಟ, ಮಂತ್ರ ಆಗಿರಬಹುದು ಎನಿಸುತ್ತಿದೆ ಎಂದರು.

ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ: ರಾಜಣ್ಣ ಭವಿಷ್ಯ

ರಾಜ್ಯದಲ್ಲಿ ಮೇ ತಿಂಗಳಲ್ಲಿ ಕೆಲ ರಾಜಕೀಯ ಬೆಳವಣಿಗೆಗಳು ಆಗಲಿದೆ ಎಂದು ರಾಜಣ್ಣ ಹೇಳಿದರು. ರಾಜಕೀಯ ನಿಂತ ನೀರಲ್ಲ. ಅದು ಪರಿಶುದ್ಧವಾಗಿರಬೇಕು ಎಂದರೆ ಹರಿಯುತ್ತಿರಬೇಕು. ಮೇ ತಿಂಗಳಲ್ಲಿ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂದರು.

ಗಲ್ಲಿಯಾಗಿ ನಿಲ್ಲಲಿ:

ನೀವೇನಾದರೂ ಸಲಹೆ ನೀಡುತ್ತೀರಾ ಎಂಬ ಪ್ರಶ್ನೆಗೆ, ನಾನು ಅವರಿಗೆ ಗಟ್ಟಿಯಾಗಿ ನಿಲ್ಲಿ ಎಂದು ಹೇಳಿಸಿಕೊಳ್ಳುವಷ್ಟು ಅಸಹಾಯಕತೆ ಬಂದಿಲ್ಲ. ಆದಾಗ್ಯೂ ಕೆಲ ಬೆಳವಣಿಗೆ ನೋಡಿದರೆ ಅವರು ಅಸಾಯಕರಾಗಿದ್ದಾರೆ ಎನಿಸುತ್ತಿದೆ. ಹೀಗಾಗಿ ಯಾರು ಮಾಟ, ಮಂತ್ರ ಮಾಡಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇನೆ ಎಂದು ರಾಜಣ್ಣ ಹೇಳಿದರು.

ನನ್ನ ಮೇಲೂ ಪ್ರಯೋಗ ನಡೆದಿತ್ತು:

ಈ ಹಿಂದೆ ನಾನು ಚುನಾವಣೆ ನಿಲ್ಲುವಾಗ ನಮ್ಮ ಹಳೆಯ ಮನೆ ಸುತ್ತಲೂ ಹಳದಿ ನೀರು ಹಾಕಿ ಮಾಟ-ಮಂತ್ರ ಮಾಡುತ್ತಾ ಇದ್ದರು. ಆದರೆ ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ಅದೇನೇ ಮಾಡಿದರೂ ಚುನಾವಣೆಯಲ್ಲೂ ನಾನು ಗೆದ್ದಿದ್ದೇನೆ ಎಂದು ರಾಜಣ್ಣ ಹೇಳಿದರು.