ಜಂತಕಲ್ ಎಂಟರ್‌ಪ್ರೈಸಸ್ (ಜಂತಕಲ್ ಮೈನ್ಸ್) ಹಾಗೂ ಅದಾನಿ ಕಂಪೆನಿ ಸೇರಿ ವಿವಿಧ ಕಂಪೆನಿಗಳ ಮೇಲಿನ ಅಕ್ರಮ ಅದಿರು ರಫ್ತು ಪ್ರಕರಣಗಳ ತನಿಖೆ ಪುನರ್ ಆರಂಭವಾಗುವ ಸಾಧ್ಯತೆಯಿದೆ.
ವಿಧಾನಸಭೆ (ಆ.23): ರಾಜ್ಯದಲ್ಲಿ 2006ರಿಂದ 2011ರವರೆಗೆ ನಡೆದಿರುವ ಅಕ್ರಮ ಅದಿರು ರಫ್ತಿನಿಂದ ಸರ್ಕಾರಕ್ಕೆ 78,245 ಕೋಟಿ ರು. ನಷ್ಟ ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ 29 ಪ್ರಕರಣಗಳ ‘ಬಿ’ ರಿಪೋರ್ಟ್ ಮರುಪರಿಶೀಲಿಸಲು ಹಾಗೂ ಈ ಪೈಕಿ ಇನ್ನೂ ನ್ಯಾಯಾಲಯದ ಅನುಮತಿ ದೊರೆಯದ ಎಂಟು ‘ಬಿ’ ರಿಪೊರ್ಟ್ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ತನ್ಮೂಲಕ ಜಂತಕಲ್ ಎಂಟರ್‌ಪ್ರೈಸಸ್ (ಜಂತಕಲ್ ಮೈನ್ಸ್) ಹಾಗೂ ಅದಾನಿ ಕಂಪೆನಿ ಸೇರಿ ವಿವಿಧ ಕಂಪೆನಿಗಳ ಮೇಲಿನ ಅಕ್ರಮ ಅದಿರು ರಫ್ತು ಪ್ರಕರಣಗಳ ತನಿಖೆ ಪುನರ್ ಆರಂಭವಾಗುವ ಸಾಧ್ಯತೆಯಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ನಿರ್ಧಾರಗಳನ್ನು ಸದನಕ್ಕೆ ಮಂಡಿಸಿದ ಸಿದ್ದರಾಮಯ್ಯ ಅವರು, 2006 ರಿಂದ 2011ರಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯಲ್ಲಿ ಆಗ ಅಧಿಕಾರದಲ್ಲಿದ್ದ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಶಾಮೀಲಾಗಿ ರಾಜ್ಯದ ಸಂಪತ್ತು ಲೂಟಿ ಮಾಡಿದ್ದರು. ಪ್ರಕರಣಗಳ ಕುರಿತು ಹಾಗೂ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ಅಂದಾಜಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಸಂಪುಟ ಸಭೆಯಲ್ಲಿ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ವಸೂಲಾತಿ ಆಯುಕ್ತರ ನೇಮಕ: ಲೋಕಾಯುಕ್ತರ ವರದಿ ಪ್ರಕಾರ 111 ಗಣಿ ಗುತ್ತಿಗೆಗಳಿಂದ ಅಕ್ರಮವಾಗಿ ರಫ್ತಾಗಿರುವ 19.07 ಟನ್ ಅದಿರಿನಿಂದ ಸರ್ಕಾರಕ್ಕೆ 78,245 ಕೋಟಿ ರು. ನಷ್ಟವಾಗಿದೆ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟ ವಸೂಲಿ ಮಾಡಲು ವಸೂಲಾತಿ ಆಯುಕ್ತರ ನೇಮಿಸಲು ಹೊಸ ಮಸೂದೆ ಮಾಡಲು ಸಂಪುಟ ಅಂಗೀಕರಿಸಿದೆ.
ಜತೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಎಸ್‌ಐಟಿ ತಂಡ ಅಥವಾ ಇನ್ನಿತರೆ ತನಿಖಾ ಸಂಸ್ಥೆಗಳಿಂದ ದಾಖಲಿಸುವ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ವಿಶೇಷ ತನಿಖಾ ತಂಡವು (ಎಸ್‌ಐಟಿ) ನ್ಯಾಯಾಲಯಕ್ಕೆ 29 ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್ ಸಲ್ಲಿಸಿದ್ದು, ಹಲವು ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್‌ನಲ್ಲಿ ದಾಖಲಿಸಿದ ಕಾರಣಗಳು ಮೇಲ್ನೋಟಕ್ಕೆ ಸಮಂಜಸವಾಗಿಲ್ಲ. ಹೀಗಾಗಿ ಈ 29 ಪ್ರಕರಣಗಳಲ್ಲಿನ ʼಬಿʼ ರಿಪೋರ್ಟ್ ಅನ್ನು ಮರುಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸನ್ನು ಒಪ್ಪಿದೆ.
ಪ್ರಕರಣ ವಾಪಸ್ ಒಪ್ಪಿಸುವಂತೆ ಸಿಬಿಐಗೆ ಮನವಿ: ಅರಣ್ಯ ಇಲಾಖೆಗೆ ಉಂಟಾದ ನಷ್ಟ ಅಂದಾಜಿಸಲು, ಅರಣ್ಯ ಇಲಾಖೆಯಲ್ಲಿ ಪ್ರಕರಣವಾರು ತನಿಖಾ ತಂಡ ರಚಿಸಲಾಗುವುದು. ಸಿಬಿಐನಿಂದ 10 ವರ್ಷಗಳ ನಂತರವೂ ತನಿಖೆ ನಡೆಸದಿರುವ ಪ್ರಕರಣಗಳ ತನಿಖೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಎಸ್‌ಐಟಿ ಮೂಲಕ ತನಿಖೆ ನಡೆಸಲು ಅವುಗಳನ್ನು ವಾಪಸ್ ಕಳುಹಿಸಲು ಕೇಂದ್ರವನ್ನು ಕೋರಲು ತೀರ್ಮಾನಿಸಲಾಗಿದೆ ಮಾನ್ಯ ನ್ಯಾಯಾಲಯಗಳಲ್ಲಿ (ಬೆಂಗಳೂರು ಹಾಗೂ ನವದೆಹಲಿ) ದಾಖಲಾಗುವ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಗಣಿಗಾರಿಕೆ ವಿಷಯದಲ್ಲಿ ಪರಿಣಿತಿ ಹೊಂದಿರುವ ಕಾನೂನು ಅಧಿಕಾರಿಗಳ ತಂಡ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಕ್ರಮವಾಗಿ ತೆಗೆದಿರುವ ಅದಿರು ವಿವರ ಪಟ್ಟಿ:
ಜಿಲ್ಲೆ - ಗಣಿ ಗುತ್ತಿಗೆ ವರ್ಗ- ಹೆಚ್ಚುವರಿ ಹೊರತೆಗೆದ ಅದಿರು (ಮೆ.ಟನ್)
ಚಿತ್ರದುರ್ಗ- ಬಿ- 37.03 ಲಕ್ಷ
ಚಿತ್ರದುರ್ಗ-ಸಿ-3.81 ಲಕ್ಷ
ತುಮಕೂರು- ಬಿ - 92.62 ಲಕ್ಷ
ತುಮಕೂರು -ಸಿ- 92.34 ಲಕ್ಷ
ಬಳ್ಳಾರಿ- ಬಿ - 5.63 ಕೋಟಿ
ಬಳ್ಳಾರಿ (ಒಎಸಿ)-ಬಿ- 2.44 ಕೋಟಿ
ಬಳ್ಳಾರಿ- ಸಿ- 4.17 ಕೋಟಿ
ಬಳ್ಳಾರಿ (ಒಎಸಿ)- 4.56 ಕೋಟಿ
ಒಟ್ಟು- 19.07 ಕೋಟಿ ಮೆಟ್ರಿಕ್ ಟನ್
ಬಹುದೊಡ್ಡ ಲೂಟಿಯು ವ್ಯವಸ್ಥೆಯ ಕಬಂಧಬಾಹುಗಳಿಗೆ ಸಿಲುಕಿ ಮುಚ್ಚಿ ಹೋಗುತ್ತಿತ್ತು. ಅಕ್ರಮದಿಂದ ಉಂಟಾದ ಭಾರಿ ನಷ್ಟ ವಸೂಲಿ ಜತೆಗೆ ಕಾನೂನು ಕ್ರಮ ಕೈಗೊಳ್ಳುವ ಕ್ರಾಂತಿಕಾರಿ ನಿರ್ಧಾರವನ್ನು ಸರ್ಕಾರ ಮಾಡಿದೆ.
-ಎಚ್.ಕೆ.ಪಾಟೀಲ, ಸಚಿವ, ಸಂಪುಟ ಉಪಸಮಿತಿ ಅಧ್ಯಕ್ಷ.


