2006ರಿಂದ 2012ರವರೆಗೆ ನಮ್ಮಲ್ಲಿರುವ ಮಾಹಿತಿ ಪ್ರಕಾರ 20 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಕಾನೂನು ಬಾಹಿರವಾಗಿ ಸಾಗಣೆಯಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ವಿಧಾನ ಪರಿಷತ್ತು (ಆ.23): ಅಕ್ರಮ ಗಣಿಗಾರಿಕೆಯಿಂದ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ಅದಿರು ರವಾನೆ ಮಾಡಿದ್ದರಿಂದ ರಾಜ್ಯಕ್ಕೆ ₹80 ಸಾವಿರ ಕೋಟಿ ನಷ್ಟವಾಗಿದೆ. ಈ ಲೂಟಿ ಹಣ ವಸೂಲಿ ಮಾಡಲು ವಸೂಲಾತಿ ಆಯುಕ್ತರನ್ನು ನೇಮಿಸುತ್ತಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಶುಕ್ರವಾರ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪರ ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ 2025 ಅನ್ನು ಮಂಡಿಸಿ ಮಾತನಾಡಿದರು.
2006ರಿಂದ 2012ರವರೆಗೆ ನಮ್ಮಲ್ಲಿರುವ ಮಾಹಿತಿ ಪ್ರಕಾರ 20 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಕಾನೂನು ಬಾಹಿರವಾಗಿ ಸಾಗಣೆಯಾಗಿದೆ. ಒಂದು ಟನ್‌ಗೆ ₹4003 ರಂತೆ ₹80 ಸಾವಿರ ಕೋಟಿಯಷ್ಟು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ. ಈ ಮೊತ್ತವನ್ನು ಜಪ್ತಿ ಅಥವಾ ವಸೂಲಿ ಮಾಡುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಅದಕ್ಕಾಗಿಯೇ ವಸೂಲಿ ಆಯುಕ್ತರ ನೇಮಿಸಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ ಎಂದರು.
ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಗುತ್ತಿಗೆದಾರರು, ಸಾಗಣೆದಾರರು, ರಫ್ತುದಾರರು, ದಾಸ್ತಾನುದಾರರು, ಖರೀದಿದಾರರು ಮತ್ತು ಮಧ್ಯವರ್ತಿಗಳನ್ನೊಳಗೊಂಡ ಅಕ್ರಮ ಗಣಿಗಾರಿಕೆ ಚಟುವಟಿಕೆ ನಡೆದಿದೆ. ಈ ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚು ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು, ಜಪ್ತಿ ಮಾಡಲು, ಮುಟ್ಟುಗೋಲು ಹಾಕಿಕೊಳ್ಳುವ ಕೆಲಸವನ್ನು ವಸೂಲಾತಿ ಆಯುಕ್ತರು ಮಾಡಲಿದ್ದಾರೆ. ರಾಜ್ಯದಲ್ಲಿ ಭಾರಿ ಅಕ್ರಮ ಮತ್ತು ಮಧ್ಯಮ ಪ್ರಮಾಣದಲ್ಲಿ ಅಕ್ರಮ ಮಾಡಿದ 111 ಕಂಪನಿಗಳು ‘ಬಿ’ ಮತ್ತು ‘ಸಿ’ ಕೆಟಗರಿಯಲ್ಲಿದ್ದು, ಅವುಗಳ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧೇಯಕವನ್ನು ಸ್ವಾಗತಿಸಿ, ವಸೂಲಾತಿ ಆಯುಕ್ತರನ್ನಾಗಿ ಹಾಲಿ ಕರ್ತವ್ಯದಲ್ಲಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆ ಅಧಿಕಾರಿ ಅಥವಾ ನಿವೃತ್ತ ಅಧಿಕಾರಿಗಳನ್ನು ನೇಮಿಸಬಾರದು. ಅವರ ಮೇಲೆ ಹೆಚ್ಚಿನ ಒತ್ತಡಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಮೂರು ಅಥವಾ ನಾಲ್ಕು ಅಧಿಕಾರಿಗಳ ಸಮಿತಿ ರಚಿಸಬೇಕು. ವಸೂಲಿ ಆಯುಕ್ತರನ್ನಾಗಿ ಮ್ಯಾಜಿಸ್ಟ್ರೇಟ್ ರನ್ನು ನೇಮಿಸಬೇಕು. ಲೂಟಿ ಹೊಡೆದ ಹಣ ವಸೂಲಿ ಮಾಡುವುದು ಮಾತ್ರವಲ್ಲ ದಂಡ ಹಾಕಬೇಕು ಎಂದು ಆಗ್ರಹಿಸಿದರು.


