ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದೊಳಗೆ ಆಂತರಿಕ ಗುದ್ದಾಟ ನಡೆಯುತ್ತಿದೆ. ಡಿಸಿಎಂ ಶಿವಕುಮಾರ್ ಸಿಎಂ ಸ್ಥಾನ ಪಡೆಯಲು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹೊರಗಡೆ ಈ ಬಗ್ಗೆ ಹೇಳಿಕೊಳ್ಳುತ್ತಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ (ಜು.21): ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದೊಳಗೆ ಆಂತರಿಕ ಗುದ್ದಾಟ ನಡೆಯುತ್ತಿದೆ. ಡಿಸಿಎಂ ಶಿವಕುಮಾರ್ ಸಿಎಂ ಸ್ಥಾನ ಪಡೆಯಲು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹೊರಗಡೆ ಈ ಬಗ್ಗೆ ಹೇಳಿಕೊಳ್ಳುತ್ತಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಶನಿವಾರ ಸಿದ್ದರಾಮಯ್ಯ ಭಾಷಣ ಆರಂಭ ಮುನ್ನವೇ ಡಿ.ಕೆ.ಶಿವಕುಮಾರ್ ಭಾಷಣ ಮುಗಿಸಿ ಅಲ್ಲಿಂದ ಹೊರಟು ಹೋದರು. ಇದರಿಂದಾಗಿ ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ಖುರ್ಚಿ ಕಳೆದುಕೊಳ್ಳುವ ಅಭದ್ರತೆ ಕಾಡುತ್ತಿದೆ. ಡಿಸಿಎಂ ಶಿವಕುಮಾರ್ ಅವರಿಗೆ ಅವಕಾಶದಿಂದ ವಂಚಿತವಾಗುತ್ತೇನೆ ಎಂಬ ಅನುಮಾನ ಕಾಡುತ್ತಿದೆ ಎಂದರು. ಹೈಕಮಾಂಡ್ ಮಾತು ಕೊಟ್ಟ ರೀತಿಯಲ್ಲಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿಲ್ಲ ಎಂಬ ಅನುಮಾನವೂ ಬಂದಿದೆ. ಇದರಿಂದಾಗಿ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಪೂರ್ಣಾವಧಿ ಮಾಡಲ್ಲ. ಯಾವುದೇ ಸಮಯದಲ್ಲಾದರೂ ಸರ್ಕಾರ ಬೀಳಬಹುದು ಭವಿಷ್ಯ ನುಡಿದರು.
ಯಾವುದೇ ಸಂದರ್ಭದಲ್ಲಿ ಪತನ: ಕಾಂಗ್ರೆಸ್ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನವಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆ ಇನ್ನು ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗೆ ಅನುದಾನವೇ ಇಲ್ಲ. ಭ್ರಷ್ಟಾಚಾರ ಮೀತಿ ಮೀರಿದ್ದು, ಅವರ ಪಕ್ಷದ ಶಾಸಕರೇ ಈಗ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಎಂದರೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಪಕ್ಷ. ಪರಿಸ್ಥಿತಿ ಬದಲಾವಣೆಯಾದರೂ ಅದರ ಮನಸ್ಥಿತಿ ಮಾತ್ರ ಇನ್ನು ಬದಲಾವಣೆಯಾಗಿಲ್ಲ ಎಂದು ದೂರಿದರು.
ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇದೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಂವಿಧಾನ ಕೋಮಾ ಸ್ಥಿತಿಯಲ್ಲಿತ್ತು. ಇಂದಿರಾ ಗಾಂಧಿ ಅವಧಿಯಲ್ಲಿ ಪ್ರಜಾಪ್ರಭುತ್ವ ಜೈಲಿನಲ್ಲಿತ್ತು. ಆ ವೇಳೆ ಅಂಬೇಡ್ಕರ್ ಬದುಕಿದ್ದರೇ ಅವರನ್ನು ಕೂಡ ಜೈಲಿಗೆ ಹಾಕುತ್ತಿತ್ತು. ಅಂತಹ ಪರಿಸ್ಥಿತಿ ಇಂದಿರಾ ಗಾಂಧಿ ಸರ್ಕಾರದಲ್ಲಿತ್ತು ಎಂದರು.ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆ ಪರವಾಗಿ ಬಾಲಾ ಅಲ್ಲಾಡುಸುತ್ತಿದ್ದೀರಿ. ನಾಯಿಗಳ ರೀತಿಯಲ್ಲಿ ವರ್ತನೆ ಮಾಡಿದರು. ನಾವು ಜನರ ಮಧ್ಯ ಘರ್ಜನೆ ಮಾಡುತ್ತಿದ್ದೇವು. ಪ್ರಜಾಪ್ರಭುತ್ವ ಉಳಿವಿಗಾಗ ಘರ್ಜನೆ ಮಾಡಿ ಜೈಲಿಗೆ ನಾವು ಹೋಗಿದ್ದೇವು. ನೀವು ಬಾಲಾ ಅಲ್ಲಾಡಿಸುವ ಕೆಲಸ ಮಾಡಿದೀರಿ. ಬಿಸ್ಕೆಟ್ ಆಸೆಗೆ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದೀರಿ ಎಂದರು.


