ಕಾಂಗ್ರೆಸ್‌ ಒಂದು ಲಕ್ಷಕ್ಕೂ ಹೆಚ್ಚು ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಭೂಮಿ ಹಕ್ಕುಪತ್ರ ವಿತರಿಸಿದ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದೆ. ಸುರ್ಜೇವಾಲಾ ಇದನ್ನು ಬಿಜೆಪಿಯ ಪ್ರತೀಕಾರದ ಕ್ರಮ ಎಂದು ಆರೋಪಿಸಿದ್ದಾರೆ. ದಲಿತ ನಾಯಕರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಖಂಡಿಸಿದೆ.

ನವದೆಹಲಿ (ಮೇ 21): ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ನಿನ್ನೆ ಹೊಸಪೇಟೆಯಲ್ಲಿ 1 ಲಕ್ಷಕ್ಕಿಂತ ಅಧಿಕ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಭೂ ಮಾಲೀಕತ್ವವವನ್ನು ನೀಡಿದ್ದನ್ನು ಸಹಿಸಿಕೊಳ್ಳದ ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕ ದಲಿತ ನಾಯಕ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ನಿನ್ನೆ ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರ 1 ಲಕ್ಷಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡಗಳಿಗೆ ಭೂ ಮಾಲೀಕತ್ವವನ್ನು ನೀಡಿದ್ದನ್ನು ಸಹಿಸದ ಬಿಜೆಪಿ, ಕರ್ನಾಟಕದ ಅತಿದೊಡ್ಡ ದಲಿತ ನಾಯಕರಲ್ಲಿ ಒಬ್ಬರಾದ, ಕರ್ನಾಟಕದ ಗೃಹಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದುರುದ್ದೇಶಪೂರಿತ ಇಡಿ ದಾಳಿ ನಡೆಸಿದೆ... 

ಭಾರತದ ಸಂವಿಧಾನ ಮತ್ತು ಎಸ್ ಸಿ, ಎಸ್ ಟಿ, ಒಬಿಸಿ ಸಮುದಾಯಗಳ ನಾಯಕರ ಮೇಲೆ ದೇಶಾದ್ಯಂತ ನಡೆಯುತ್ತಿರುವ ನಿರಂತರ ದಾಳಿ ಒಂದು ರೀತಿ ರೂಢಿಯಾಗಿಬಿಟ್ಟಿದೆ. @DrParameshwara ಅವರ ಮೇಲಿನ ದಾಳಿ ಕೂಡ ಇದೇ ದುಷ್ಟ ಮಾದರಿಯದ್ದು... ತುಮಕೂರು ಗ್ರಾಮೀಣ ಭಾಗದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಲು ಆರಂಭಿಸಿದ, ಪರಮೇಶ್ವರ್ ಅವರು ನಡೆಸುತ್ತಿರುವ ಸಿದ್ಧಾರ್ಥ ತಾಂತ್ರಿಕ ವಿದ್ಯಾಲಯ ಶುರುವಾಗಿದ್ದು 1979 ರಲ್ಲಿ ಅಂದರೆ 46 ವರ್ಷಗಳ ಹಿಂದೆ, ಸಿದ್ದಾರ್ಥ ಮೆಡಿಕಲ್ ಕಾಲೇಜ್ ಶುರುವಾಗಿದ್ದು 1988 ರಲ್ಲಿ ಅಂದರೆ 28 ವರ್ಷಗಳ ಹಿಂದೆ.

ಈ ಸಂಸ್ಥೆ ಶುರುವಾದ 46 ವರ್ಷಗಳ ನಂತರ ಮೋದಿ ಸರ್ಕಾರ ಈಗ ತಪ್ಪನ್ನ ಹುಡುಕುತ್ತಿರೋದು ನಿಜಕ್ಕೂ ಆಶ್ಚರ್ಯವಾದದ್ದು. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಸಕ್ರಿಯವಾಗಿ ತನಿಖೆ ನಡೆಸುತ್ತಿರುವ ಗೃಹ ಇಲಾಖೆಯನ್ನು ಮುನ್ನಡೆಸುತ್ತಿರುವ ಗೃಹಸಚಿವ ಪರಮೇಶ್ವರ್‌ ಅವರ ವಿರುದ್ಧ ನಡೆದಿರುವ ಇಡಿ ದಾಳಿ ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಕುತಂತ್ರ. ಜೊತೆಗೆ ತುಳಿತಕ್ಕೊಳಗಾದವರ ಪರವಾದ ಗಟ್ಟಿಧ್ವನಿಯಾದವರನ್ನು ಕುಗ್ಗಿಸುವ ಒಂದು ಭಾಗ.

ಕರ್ನಾಟಕದ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಮುಂದುವರೆಸುವುದರ ಜೊತೆಗೆ 6 ನೇ ಗ್ಯಾರಂಟಿಯಾದ ಭೂಮಿಯ ಹಕ್ಕನ್ನು ಎಸ್‌ಸಿ, ಎಸ್‌ಟಿ ಸಮುದಾಯದ 1 ಲಕ್ಷ ನಮ್ಮ ಸಹೋದರ, ಸಹೋದರಿಯರಿಗೆ ನೀಡುವ ಕೈಂಕರ್ಯವನ್ನು ಬದ್ಧತೆಯಿಂದ ನಿರ್ವಹಿಸಲಿದೆ. ಸತ್ಯಕ್ಕೆ ಎಂದಿಗೂ ಜಯ… ಸತ್ಯಮೇವ ಜಯತೆ…' ಎಂದು ಟ್ವೀಟ್‌ನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

Scroll to load tweet…