ಹೊಸದಾಗಿ 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ದೊರೆತ ಕೂಡಲೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಸುವರ್ಣ ವಿಧಾನಸಭೆ (ಡಿ.17): ಹೊಸದಾಗಿ 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ದೊರೆತ ಕೂಡಲೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಬಿಜೆಪಿಯ ಚನ್ನಬಸಪ್ಪ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 545 ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ, 402 ಪಿಎಸ್‌ಐ ನೇಮಕಾತಿಯಲ್ಲಿನ ಗೊಂದಲಗಳಿಂದಾಗಿ ಪಿಎಸ್‌ಐ ಕೊರತೆ ಹೆಚ್ಚಿತ್ತು. ಇದೀಗ ಅವೆಲ್ಲವನ್ನೂ ನಿವಾರಿಸಿ 947 ಪಿಎಸ್‌ಐ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅದರ ಜತೆಗೆ ಹೊಸದಾಗಿ 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಬಳಿಕ ಎಲ್ಲೆಲ್ಲಿ ಪಿಎಸ್‌ಐ ಕೊರತೆಯಿದೆಯೋ ಅಲ್ಲಿಗೆ ನಿಯೋಜಿಸಲಾಗುವುದು ಎಂದರು.
ಅದಕ್ಕೂ ಮುನ್ನ ಶಿವಮೊಗ್ಗ ನಗರದಲ್ಲಿನ ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಬೇಕು ಹಾಗೂ ಶಿವಮೊಗ್ಗಕ್ಕೆ ಪೊಲೀಸ್ ಆಯುಕ್ತಾಲಯ ನೀಡಬೇಕು ಎಂದು ಚನ್ನಬಸಪ್ಪ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯತಿಸಿದ ಸಚಿವರು, ಶಿವಮೊಗ್ಗ ಜಿಲ್ಲೆಯಲ್ಲಿ 33 ಪೊಲೀಸ್ ಠಾಣೆಗಳಿದ್ದು, 1549 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ 1,394 ಹುದ್ದೆ ಭರ್ತಿಯಾಗಿದ್ದು, 155 ಹುದ್ದೆಗಳು ಖಾಲಿಯಿವೆ. ಇನ್ನು, ನಿತ್ಯದ ಕೆಲಸಗಳಿಗೆ ಸಮಸ್ಯೆಯಾಗದಂತೆ 103 ಗೃಹ ರಕ್ಷಕ ಸಿಬ್ಬಂದಿಯನ್ನು ಠಾಣೆಗಳಿಗೆ ನೇಮಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ಕಾರ್ಯ ಪಡೆ
ಶಿವಮೊಗ್ಗ ಜಿಲ್ಲೆಯನ್ನು ನಾವೂ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಇತ್ತೀಚೆಗೆ ನಡೆದ ಘಟನೆಯನ್ನಾಧರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕಾರ್ಯ ಪಡೆಯನ್ನು ಶಿವಮೊಗ್ಗಕ್ಕೆ ನಿಯೋಜಿಸಲಾಗಿದೆ. ಹಾಗೆಯೇ, ಶಿವಮೊಗ್ಗಕ್ಕೆ ಪೊಲೀಸ್ ಆಯುಕ್ತಾಲಯ ನೀಡಲು ಕೆಲ ಮಾನದಂಡಗಳನ್ನು ಗಮನಿಸಬೇಕಿದೆ. ಅಗತ್ಯವಿದ್ದರೆ, ಮಾನದಂಡದಲ್ಲಿ ಅವಕಾಶವಿದ್ದರೆ ಪೊಲೀಸ್ ಆಯುಕ್ತಾಲಯ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.


