ಅಂಬೇಡ್ಕರ್ ಸೋಲಿನಲ್ಲಿ ಸಾವರ್ಕರ್, ಢಾಗೆ ಕೈವಾಡವಿತ್ತೆಂದು ಅವರೇ ಪತ್ರ ಬರೆದಿದ್ದಾರೆ ಎಂದು ಖರ್ಗೆ ಪತ್ರ ಪ್ರದರ್ಶಿಸಿದರು. ಬಿಜೆಪಿ, ಆರ್ಎಸ್ಎಸ್ ಅಂಬೇಡ್ಕರ್ ವಿರೋಧಿಗಳು, ಕಾಂಗ್ರೆಸ್ ಅವರಿಗೆ ಸಂಪೂರ್ಣ ಬೆಂಬಲ ನೀಡಿತ್ತು. ಸಂವಿಧಾನ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಜಾತಿ ಜಗಳ ಬಿಟ್ಟು ಒಗ್ಗಟ್ಟಾಗಬೇಕು.
ಕಲಬುರಗಿ (ಮೇ 03): ನಮ್ಮ ದೇಶದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷದಿಂದಲೇ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಲಾಗಿದೆ ಎಂದು ಬೈಯುತ್ತಾರೆ. ಆದರೆ, ಸ್ವತಃ ಬಾಬಾ ಸಾಹೇಬ ಅಂಬೇಡ್ಕರ್ ಅವರೇ ನನ್ನ ಸೇಲಿಗೆ ಎಸ್.ಎ. ಢಾಗೆ ಮತ್ತು ವೀರ್ ಸಾವರ್ಕರ್ ಕೈವಾಡವಿದೆ ಎಂದು ಪತ್ರ ಬರೆದಿದ್ದಾರೆ. ಇಲ್ಲಿದೆ ನೋಡಿ ಆ ಪತ್ರವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರದರ್ಶನ ಮಾಡಿದ್ದಾರೆ.
ಕಲಬುರಗಿಯ ಗೊಬ್ಬೂರನಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ನವರಿಗೆ ಬಹಳಷ್ಟು ಜನ ಬೈಯ್ತಾರೆ. ಆದರೆ ಸ್ವತಃ ಬಾಬಾ ಸಾಹೇಬರೇ ಹೇಳಿದ್ದರು, ಕಾಂಗ್ರೆಸ್ ನನಗೆ ಸಂಪೂರ್ಣ ಬೆಂಬಲ ನೀಡಿತ್ತು ಅಂತಾ. ಅದನ್ನು ತಿಳಿದುಕೊಳ್ಳದೆ ಕೆಲವು ಜನರು ಮಾತ್ರ ಬಾಬಾ ಸಾಹೇಬರಿಗೆ ಕಾಂಗ್ರೆಸ್ ಸೋಲಿಸಿದ್ದು ಅಂತಾರೆ. ನಿಮಗೆ ಗೊತ್ತಿರಲಿ ಸಂವಿಧಾನ ರಚನೆ ವೇಳೆ ಬಿಜೆಪಿಯವರು ಇನ್ನೂ ಹುಟ್ಟಿರಲಿಲ್ಲ. ನನ್ನ ಸೋಲಿನಲ್ಲಿ ಎಸ್.ಎ ಢಾಗೇ, ವೀರ್ ಸಾವರ್ಕರ್ ಕೈವಾಡವಿತ್ತು ಅಂತಾ ಡಾ.ಬಿ.ಆರ್.ಅಂಬೇಡ್ಕರ್ ಪತ್ರ ಬರೆದಿದ್ದರು ಎಂದು ವೇದಿಕೆ ಮೇಲೆ ಅಂಬೇಡ್ಕರ್ ಬರೆದಿದ್ದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರದರ್ಶನ ಮಾಡಿದ್ದಾರೆ.
ನಮ್ಮ ದೇಶದ ಸಂವಿಧಾನ ಎಷ್ಟೇ ಸರಿಯಿದ್ದರೂ ಅದನ್ನ ನಡೆಸಿಕೊಂಡು ಹೋಗುವವರು ಸರಿಯಿಲ್ಲ ಅಂದರೆ ಏನ್ ಮಾಡೋಕೆ ಆಗುತ್ತೆ? ಬಿಜೆಪಿ, ಆರ್ಎಸ್ಎಸ್ನವರು ಈ ಮೊದಲು ಡಾ ಅಂಬೇಡ್ಕರ್ ಹೆಸರು ಸಹ ಹೇಳುತ್ತಿರಲಿಲ್ಲ, ಇನ್ನು ಅವರ ಫೋಟೊ ಇಡೋದು ದೂರದ ಮಾತು. ಡಾ.ಅಂಬೇಡ್ಕರ್ರ ಸಂವಿಧಾನ ಮುಳುಗಿದರೆ ನಾವು ನೀವೆಲ್ಲ ಮುಳುಗುತ್ತೇವೆ. ಸಂವಿಧಾನಕ್ಕೆ ಕೆಟ್ಟ ಹೆಸರು ತಂದರೆ ಇಡೀ ದೇಶಕ್ಕೆ ಕೆಟ್ಟದಾಗುತ್ತದೆ ಎಂದು ಹೇಳಿದರು.
ಇನ್ನು ನಮ್ಮ ದೇಶದಲ್ಲಿ ಅಂಬೇಡ್ಕರ್ ಆಚರಣೆ ಅನ್ನೋದೆ ನಮಗೆ ದೊಡ್ಡ ಹಬ್ಬಗಳಿದ್ದಂತೆ. ಜಾತ್ರೆ, ಉತ್ಸವಗಳು ಕೆಲವು ಜಾತಿ, ಜನಾಂಗದವರಿಗೆ ಸೀಮಿತ ಆಗಿರುತ್ತವೆ. ಆದರೆ, ಅಂಬೇಡ್ಕರ್ ಆಚರಣೆ ಅಂದಾಗ ಇಡೀ ಭಾರತೀಯರು ಸಂಭ್ರಮಿಸುವ ಸಮಾರಂಭ ಆಗಿರುತ್ತವೆ. ಬೌದ್ಧ ಧಮ್ಮದ ಚಿಹ್ನೆಗಳನ್ನು ಇಂದು ದೇಶದ ರಾಷ್ಟ್ರೀಯ ಸಂಕೇತಗಳಾಗಿ ಮಾಡುವ ಮೂಲಕ ಸಮಾನತೆ ಸಾರುವ ಕೆಲಸ ಬಾಬಾಸಾಹೇಬರು ಮಾಡಿದ್ದಾರೆ. ಕೆಲವರು ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಾರಾ? ಎಂದು ವ್ಯಂಗ್ಯ ಮಾಡುತ್ತಾರೆ. ಅಂತವರಿಗೆ ಹುಟ್ಟುಗುಣ ಸುಟ್ಟರು ಹೋಗಲ್ಲ ಅನ್ನೋ ರೀತಿಯವರು ಅವರೆಲ್ಲ. ಅವರ ವಿಚಾರವನ್ನು ಕೈಬಿಡಬೇಕು ಎಂದು ಹೇಳಿದರು.
ಇದೀಗ ನಮ್ಮ ದೇಶದಲ್ಲಿ ಸ್ವತಂತ್ರವೇ ಇಲ್ಲವಾಗಿದೆ. ಯಾರಾದರೂ ವ್ಯವಸ್ಥೆಯ ವಿರುದ್ದ, ಸರ್ಕಾರದ ವಿರುದ್ದ ಮಾತನಾಡಿದರೆ, ಸಾಹಿತ್ಯ ರೂಪದಲ್ಲಿ ಹಾಡಿದರೆ ಅಂಥವರನ್ನು ಜೈಲಿಗೆ ಹಾಕಿಸುತ್ತಾರೆ. ಸಾಕಷ್ಟು ಜನ ಸರ್ಕಾರದ ನೀತಿಗಳನ್ನು ಖಂಡಿಸಿದರೆ ಅವರನ್ನು ಜೈಲಿಗಟ್ಟುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿಗರು ಜನ್ಮತಃ ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿವಳಾಗಿದ್ದರೆ ನೆಹರು ಅವರು ಸಂವಿಧಾನ ರಚನೆಗೆ ಅಂಬೇಡ್ಕರ್ ಅವರಿಗೆ ಅವಕಾಶ ನೀಡುತ್ತಿರಲಿಲ್ಲ, ಮೊದಲ ಸಂಪುಟದಲ್ಲಿ ಅವಕಾಶ ನೀಡುತ್ತಿರಲಿಲ್ಲ. ಇದನ್ನು ಈ ಬಿಜೆಪಿ ಮತ್ತು ಸಂಘಪರಿವಾರದವರು ಅರಿತುಕೊಳ್ಳಬೇಕು ಎಂದರು.
ಯಾವುದೇ ಜಾತಿಯವರಾಗಿರಲಿ ಜಾತಿ ಜಾತಿಗಳ ನಡುವೆ ಜಗಳ ಆಡುವುದನ್ನು ಮೊದಲು ಬಿಡಿ. ನಿಮ್ಮ ನಡುವೆ ಜಗಳ ಹಚ್ಚುವ ಹುನ್ನಾರ ನಡೆಸಿರುವವರು ಯಾವಾಗಲೂ ಕೈಯಲ್ಲಿ ಪೆಟ್ರೋಲ್ ಹಿಡಿದು ದೇಶದ ತುಂಬಾ, ಗಲ್ಲಿ ಗಲ್ಲಿಯ ತುಂಬಾ ತಿರುಗುತ್ತಿದ್ದಾರೆ. ಅವರು ಧರ್ಮದ ಮುಖವಾಡ ಧರಿಸಿದ್ದಾರೆ. ಅವರಿಂದ ಜನ ಜಾಗರೂಕತೆಯಿಂದ ಇರಬೇಕು. ನೀವು ಜಾತಿಗಳ ನಡುವೆ ಜಗಳ ಆಡೋದು ಬಿಟ್ಟು ಒಗ್ಗಟ್ಟಾದರೆ ಇಡೀ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಬಾಬಾಸಾಹೇಬರು ಕಷ್ಟ ಪಟ್ಟು ದೇಶಕ್ಕೆ ಸಮರ್ಪಿಸಿದ ಸಂವಿಧಾನ ಉಳಿಸಿದ ಕೆಲಸ ಈಗ ದೇಶವಾಸಿಗಳ ಹೆಗಲ ಮೇಲಿದೆ. ಸಂವಿಧಾನ್ ಬಚಾ ತೋ ಭಾರತ್ ಬಚೇಗಾ, ನಹಿ ತೋ ಏ ಸಂಘ, ಬಿಜೆಪಿ ಕೆ ಲೋಗ್ ಬಟಾ ಬಟಾಕೆ ಭಾರತ್ ತೋಡತಾ ಹೈ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.


