2013ರಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ದೆಹಲಿಯಲ್ಲಿರುವ ತಮ್ಮ ಸ್ನೇಹಿತರ ಮೇಲೆ ಒತ್ತಡ ಹೇರಿ ಯೋಜನೆಗೆ ಅನುಮತಿ ಕೊಡಿಸಿ ಎಂದರು. ದರೆ, ಕೂಡಲೇ ಸಾಲ ಮಾಡಿಯಾದರೂ ಯೋಜನೆ ಪೂರ್ಣಗೊಳಿಸಲಾಗುವುದು.

ವಿಧಾನಸಭೆ (ಡಿ.10): ‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ 2013ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿದೆ. ಬಿಜೆಪಿ ನಾಯಕರು ಒತ್ತಡ ಹೇರಿ ಯೋಜನೆಗೆ ಅನುಮತಿ ಕೊಡಿಸಿದರೆ ಸಾಲ ಮಾಡಿಯಾದರೂ ಯೋಜನೆ ಪೂರ್ಣಗೊಳಿಸಲು ಬದ್ಧವಾಗಿದ್ದೇವೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಯತ್ನಾಳ್ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಸ್ಥಿತಿಗತಿ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವಕುಮಾರ್, ಮೊದಲ ಬಾರಿಗೆ ಮಹಾರಾಷ್ಟ, 2ನೇ ಬಾರಿಗೆ ಆಂಧ್ರ ಪ್ರದೇಶದ ಅಡ್ಡಗಾಲು ಹಾಕಿವೆ.

2013ರಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ದೆಹಲಿಯಲ್ಲಿರುವ ತಮ್ಮ ಸ್ನೇಹಿತರ ಮೇಲೆ ಒತ್ತಡ ಹೇರಿ ಯೋಜನೆಗೆ ಅನುಮತಿ ಕೊಡಿಸಿ ಎಂದರು. ದರೆ, ಕೂಡಲೇ ಸಾಲ ಮಾಡಿಯಾದರೂ ಯೋಜನೆ ಪೂರ್ಣಗೊಳಿಸಲಾಗುವುದು. ಕೇಂದ್ರ ಸಚಿವರಾದ ಸೋಮಣ್ಣ ಅವರ ಜೊತೆ ಮೂರು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಈ ಬಗ್ಗೆ ಕರೆದಿದ್ದ ಸಂಬಂಧಪಟ್ಟ ರಾಜ್ಯಗಳ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿದ್ದೇನೆ ಎಂದು ತಿಳಿಸಿದ್ದರು ಎಂದರು.

ಯೋಜನೆ ಪೂರ್ಣಗೊಳಿಸಲು ಬದ್ಧ: ‘ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಗೂ ನಾವು ಚರ್ಚೆ ಮಾಡಿ ಭೂ ಪರಿಹಾರದ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಆಗಿದ್ದ ಭೂ ಪರಿಹಾರ ತೀರ್ಮಾನ ಬದಲಿಸಿ ಖುಷ್ಕಿ ಭೂಮಿಗೆ 30 ಲಕ್ಷ ರು, ತರಿ ಭೂಮಿಗೆ 40 ಲಕ್ಷ ರು, ಕಾಲುವೆಗಳಿಗೆ ಬಳಕೆಯಾಗುವ ಖುಷ್ಕಿ ಭೂಮಿಗೆ 25 ಲಕ್ಷ ರು. ಹಾಗೂ ತರಿ ಭೂಮಿಗೆ 30 ಲಕ್ಷ ರು. ನಿಗದಿ ಮಾಡಲಾಗಿದೆ. ಈ ಯೋಜನೆ ಪೂರ್ಣಗೊಳಿಸಲು ನಾವು ಬದ್ಧವಾಗಿದ್ದೇವೆ. ಎಲ್ಲಾದರೂ ಹಣ ತಂದು ವೆಚ್ಚ ಮಾಡಲು ಯೋಜನೆ ರೂಪಿಸಿದ್ದೇವೆ. ವರ್ಷಕ್ಕೆ 15-20 ಸಾವಿರ ಕೋಟಿ ರು. ನೀಡಬೇಕು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಪೂರ್ಣಗೊಳಿಸಬೇಕು ಎಂದು ಹೊರಟಿದ್ದೇವೆ. ಕೆಲ ಕಡೆ ಕೆಲಸವನ್ನೂ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.

ಈವರೆಗೆ 50,452 ಕೋಟಿ ರು. ವೆಚ್ಚ: ಯೋಜನೆಗೆ 188 ಗ್ರಾಮಗಳ 75,563 ಎಕರೆ ಜಮೀನು ಮುಳುಗಡೆಯಾಗುತ್ತದೆ. ಈ ಪೈಕಿ 2,543 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಿಸಲಾಗಿರುತ್ತದೆ. ಬಾಕಿ ಮುಳುಗಡೆ ಹೊಂದಲಿರುವ ಜಮೀನುಗಳಿಗೆ ಸರ್ಕಾರದ ಆದೇಶ ಅ.9ರಲ್ಲಿನ ಒಪ್ಪಂದದ ಐ ತೀರ್ಪು ದರಗಳನ್ವಯ ಭೂ ಪರಿಹಾರ ಮೊತ್ತ ಪಾವತಿಸಲು ಕ್ರಮ ಜರುಗಿಸಲಾಗುತ್ತಿದೆ. ನವೆಂಬರ್‌ವರೆಗೆ ಭೂಸ್ವಾಧೀನ ಹಾಗೂ ಪುನರ್‌ ನಿರ್ಮಾಣ ವೆಚ್ಚ ಸೇರಿ 50,452 ಕೋಟಿ ರು. ವೆಚ್ಚ ಭರಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಉತ್ತರಿಸಿದ್ದಾರೆ.

ಯತ್ನಾಳ್‌ ಸಭಾತ್ಯಾಗ

ಕಳೆದ ಬಾರಿ ಸ್ವಾಧೀನಪಡಿಸಿಕೊಂಡ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಸುಮಾರು 5,000 ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ಮಾಡಿದ್ದರೂ ನೀಡುತ್ತಿಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು ಈ ವೇಳೆ ಡಿ.ಕೆ. ಶಿವಕುಮಾರ್‌, ವಕೀಲರು ಹಾಗೂ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ಅವಾರ್ಡ್‌ ಮಾಡಿಸಿದ್ದಾರೆ. 10 ಲಕ್ಷ ಜಮೀನಿಗೆ 10 ಕೋಟಿ ರು. ಆರ್ಡರ್‌ ಮಾಡಿಸಿದರೆ ಕೊಡಲು ಸಾಧ್ಯವಿಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನಾವು ರಾಜ್ಯದ ಹಿತ ಕಾಪಾಡಲು ಬದ್ಧ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್‌, ನ್ಯಾಯಾಲಯದ ಆದೇಶ ಹಾಗೂ ರೈತರಿಗೆ ಅವಮಾನ ಮಾಡಿದ್ದೀರಿ. ಈ ಅವಮಾನ ಖಂಡಿಸಿ ಸಭಾತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿ ಸಭಾತ್ಯಾಗ ಮಾಡಿದರು.