ಕನ್ನೇರಿ ಶ್ರೀಗಳ ವಿಜಯಪುರ ಮತ್ತು ಬಾಗಲಕೋಟೆ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧದ ಆದೇಶ ಹೊರಡಿಸಿದ್ದು, ಈ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲ್ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗ (ಅ.28): ಕನ್ನೇರಿ ಶ್ರೀಗಳ ವಿಜಯಪುರ ಮತ್ತು ಬಾಗಲಕೋಟೆ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧದ ಆದೇಶ ಹೊರಡಿಸಿದ್ದು, ಈ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲ್ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನೇರಿ ಶ್ರೀಗಳ ವಿರುದ್ಧ ಹೇರಿದ ನಿರ್ಬಂಧವನ್ನು ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು. ವೀರಶೈವ ಲಿಂಗಾಯತ ವಿರುದ್ಧ ಮಾತನಾಡಿದ ಎಂ.ಬಿ. ಪಾಟೀಲರ ಬೇಡಿಕೆಯ ಬಗ್ಗೆ ಹಿರಿಯ ಸಚಿವರಾದ ಈಶ್ವರ್ ಖಂಡ್ರೆ ಕೂಡ ಖಂಡಿಸಿದ್ದಾರೆ. ಕಾಂಗ್ರೆಸ್‌ನ ಅಧಿಕಾರದ ಆಟಾಟೋಪ ಎಲ್ಲಿಯವರೆಗೆ ನಡೆಯುತ್ತದೆಯೋ ಗೊತ್ತಿಲ್ಲ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ನಡುವಿನ ಕಿತ್ತಾಟ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು ರಾಜ್ಯದ ಜನತೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಭ್ಯಸ್ಥರು ವೀಕ್ಷಿಸುತ್ತಿದ್ದಾರೆ. ಯಾವುದಕ್ಕೂ ಒಂದು ಮಿತಿ ಇರಬೇಕು. ವೈಯಕ್ತಿಕ ವಿಷಯಕ್ಕೆ ಕುಟುಂಬ ತರಬಾರದು ಎಂದ ಅವರು ಸೈದ್ಧಾಂತಿಕವಾಗಿ ವಿಷಯವಾಗಿದ್ದರೆ ನೇರವಾಗಿ ಖಂಡಿಸಬಹುದು ಎಂದರು. ಪ್ರಸ್ತುತ ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದ ರಾಜಕಾರಣ ನಡೆಯುತ್ತಿದ್ದು, 136 ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿ ಅಧಿಕಾರ ಕೊಟ್ಟಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸಣ್ಣ ಸಣ್ಣ ವಿಷಯಕ್ಕೆ ಆ ಪಕ್ಷದ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತದೆ. ಆದರೆ, ಮುಖ್ಯಮಂತ್ರಿ ಕುರ್ಚಿ ಬಗ್ಗೆ ಸ್ವತಃ ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಮಾತನಾಡಿದ್ದು, ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದರು. ಇಡೀ ರಾಜ್ಯ ಗುಂಡಿಮಯವಾಗಿದೆ. ರಸ್ತೆ ದುರಸ್ತಿ, ವಿದ್ಯುತ್ ಬಿಲ್ ಸಂದಾಯಕ್ಕೆ ಸರ್ಕಾರದಲ್ಲಿ ಹಣವಿಲ್ಲ. ಸರ್ಕಾರ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುವ ಕ್ಷಣ ದೂರವಿಲ್ಲ ಎಂದು ಟೀಕಿಸಿದರು.
ಕನ್ನೇರಿ ಶ್ರೀಗೆ ನಿರ್ಬಂಧ ವಿರೋಧಿಸಿ ನಾಳೆ ಸಭೆ
ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧ ವಿಧಿಸಿ ಹೊರಡಿಸಿರುವ ಆದೇಶದ ವಿರುದ್ಧ ಚರ್ಚಿಸಲು ಹಾಗೂ ಈ ಆದೇಶದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಅ.29ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ವೆಲ್‌ಕಮ್ ಹೋಟೆಲ್‌ನಲ್ಲಿ ಮಹತ್ವದ ಸಭೆ ಕರೆಯಲಾಗಿದೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಸಭೆಯಲ್ಲಿ ಹಲವು ಸಾಧು ಸಂತರು, ಮಠಾಧೀಶರು ಭಾಗವಹಿಸಲಿದ್ದಾರೆ. ಅಲ್ಲದೇ, ಹಿಂದೂ ಸಮಾಜದ ಪ್ರಮುಖರು, ವೀರಶೈವ ಸಮಾಜದ ಮುಖಂಡರು ಭಾಗವಹಿಸಲಿದ್ದು, ನಾನು ಕೂಡ ಈ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ಜಾತಿ ಗಣತಿಯಿಂದಾಗಿ ವೀರಶೈವ ಲಿಂಗಾಯತ ಸಮಾಜವನ್ನು ಸರ್ಕಾರ ಛಿದ್ರ ಛಿದ್ರ ಮಾಡಿದ್ದು, ಕಾಂಗ್ರೆಸ್ ನ ಕೆಲವು ಮುಖಂಡರು, ಲಿಂಗಾಯತ ಸಾಧು ಸಂತರು ಬಾಯಿಗೆ ಬಂದಂತೆ ಮಾತನಾಡಿ ಹಿಂದೂ ಸಮಾಜವನ್ನು ಹೀಗಳೆಯುತ್ತಿದ್ದಾರೆ. ಲಿಂಗಾಯತರು, ಮುಸ್ಲಿಮರು ಇಬ್ಬರೂ ಒಂದೇ. ದೇವಸ್ಥಾನಕ್ಕೆ ಹೋಗಬಾರದು. ಹೆಂಡ ಕುಡಿಯಬಹುದು, ಮಾಂಸ ತಿನ್ನಬಹುದು ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದನ್ನು ಖಂಡಿಸಿ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಪ್ರತಿಕ್ರಿಯೆ ನೀಡಿದ್ದನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ಕನ್ನೇರಿ ಶ್ರೀಗಳ ವಿರುದ್ಧ ನಿರ್ಬಂಧ ಆದೇಶವನ್ನು ಹೊರಡಿಸಿದೆ. ಇದನ್ನು ಸಾರ್ವಜನಿಕವಾಗಿ ಖಂಡಿಸಲಾಗುತ್ತಿದೆ ಎಂದರು.


