ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸುವ ಮೂಲಕ ಕೇಂದ್ರ ಸರ್ಕಾರವು ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ.
ಮೈಸೂರು (ಡಿ.19): ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸುವ ಮೂಲಕ ಕೇಂದ್ರ ಸರ್ಕಾರವು ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ. ಪ್ರತಿಯೊಂದು ಹಳ್ಳಿಯು ತನ್ನ ಆಹಾರ, ಬಟ್ಟೆ ಮತ್ತು ಇತರ ಅಗತ್ಯಗಳಿಗಾಗಿ ಸ್ವಾವಲಂಬಿಯಾಗಿರಬೇಕು, ಪ್ರಾಮಾಣಿಕ ಹಾದಿಯ ದುಡಿಮೆಯ ಮೂಲಕ ಎಲ್ಲರೂ ಗ್ರಾಮ ಸ್ವರಾಜ್ಯ ನಿರ್ಮಾಣ ಮಾಡಿ, ದೇಶವೇ ಸ್ವಾವಲಂಬನೆ ಮತ್ತು ಸಹಕಾರಿ ತತ್ವದ ಅಡಿಪಾಯದ ಮೇಲೆ ನಿಲ್ಲಬೇಕು ಎಂಬುದು ಈ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಯವರ ಬಹುದೊಡ್ಡ ಆಶಯವಾಗಿತ್ತು.
ಹೀಗಾಗಿಯೇ ಅವರು ಖಾದಿ ನೇಯ್ಗೆ ಮತ್ತು ಗ್ರಾಮೀಣವಾಗಿ ಲಭ್ಯವಿರುವ ಶ್ರಮದಾಯಕ ಕೆಲಸಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಗ್ರಾಮ ಸ್ವರಾಜ್ಯದ ಬಗ್ಗೆ ಗಾಂಧೀಜಿ ಅವರಿಗೆ ಇದ್ದ ಅವರ ಒಟ್ಟಾರೆ ಆಲೋಚನೆಗಳು 1909ರಲ್ಲಿ ಪ್ರಕಟವಾದ ಅವರ ಹಿಂದ್ ಸ್ವರಾಜ್ ಪುಸ್ತಕದಲ್ಲಿ ನಾವು ಕಾಣಬಹುದು. ಇದೇ ರೀತಿಯಾಗಿ ಜ್ಞಾನ ವಲಯದ ಎಲ್ಲ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಡಾ.ಅಂಬೇಡ್ಕರ್ ಅವರು ಸಹ ಗ್ರಾಮೀಣ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಆಲೋಚನೆ ಹೊಂದಿದ್ದರು. ಗಾಂಧೀಜಿಯವರ ಆದರ್ಶಮಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಗೂ, ಶೋಷಿತ ವರ್ಗಗಳನ್ನು ಸಮಾನವಾಗಿ ಒಳಗೊಳ್ಳಬೇಕಾದ ಸ್ವರಾಜ್ಯದ ಕಲ್ಪನೆಗೂ ಇರುವ ವ್ಯತ್ಯಾಸ ಮತ್ತು ಅದಕ್ಕೆ ಇರಬೇಕಾದ ಪರಿಹಾರ ಕ್ರಮಗಳ ಬಗ್ಗೆ ಬಾಬಾ ಸಾಹೇಬರು ಸ್ಪಷ್ಟವಾಗಿ ವಿವರಿಸಿದ್ದರು.
1932 ರಲ್ಲಿ ಜರುಗಿದ ಶಾಸನಸಭಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಬಾಬಾ ಸಾಹೇಬರು ಸ್ಪಷ್ಟವಾಗಿ ತಿಳಿಸಿದ್ದಾರೆ. ಗ್ರಾಮದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಗ್ರಾಮ ಮಟ್ಟದಿಂದ ದೇಶಪ್ರೇಮ ಕಲ್ಪನೆ ಹುಟ್ಟುವುದು, ಎಲ್ಲರಲ್ಲೂ ಬೇಧವಿಲ್ಲದ ಸಹಕಾರ, ಸೌಹಾರ್ದತೆಯಿಂದ ಮಾತ್ರವೇ ಎಂದು ಅವರು ಅಭಿಪ್ರಾಯಪಡುತ್ತಾರೆ. ಅದು ಸತ್ಯ ಕೂಡಾ. ಇದೇ ರೀತಿಯ ಸ್ವಾವಲಂಬನೆಯ ಮಾರ್ಗವನ್ನು ಅನುಸರಿಸುವ ಸಲುವಾಗಿ ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವಕ್ಕೆ ಬಂದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿ ಮಾಡಿತು. ಹಳ್ಳಿಗಾಡಿನ ಜನರಿಗೆ ನಿಗದಿತ ಆದಾಯವನ್ನು ಖಾತರಿಪಡಿಸುವ ಮತ್ತು ಅವರನ್ನು ಸ್ವಾವಲಂಬಿ ಆಗಿಸುವಂತಹ ಮಹತ್ವದ ಉದ್ದೇಶ ಹೊಂದಿದ ಈ ಉದ್ಯೋಗ ಖಾತರಿ ಯೋಜನೆಗೆ ಅರ್ಹವಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಗ್ರಾಮ ಸ್ವರಾಜ್ಯದ ತತ್ವದ ಪ್ರತಿಪಾದಕ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಿತು.
ದೇಶಕಂಡ ಶಕ್ತಿಶಾಲಿ ಪ್ರಧಾನಿ ಇಂದಿರಾ ಗಾಂಧೀಜಿಯವರ ಕಾಲದಲ್ಲೂ 20 ಅಂಶಗಳ ಕಾರ್ಯಕ್ರಮದ ರೂಪದಲ್ಲಿ ಇಂತಹ ಹಲವು ಜನಪರ ಕಾರ್ಯಕ್ರಮಗಳು ಜಾರಿಯಾಗಿದ್ದವು. ದೇಶದ ಭೂ ರಹಿತ ಗ್ರಾಮೀಣ ಪ್ರದೇಶದ ಜನರ ಏಳಿಗೆಗಾಗಿ ಯುಪಿಎ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಕೇವಲ ವ್ಯಾಪಾರಿಗಳು ಮತ್ತು ಉದ್ಯಮಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಮತ್ತದರ ಮಿತ್ರ ಪಕ್ಷಗಳು, ಜನಪರ ಯೋಜನೆಗಳನ್ನು ವಿರೂಪಗೊಳಿಸಿ, ಅವನ್ನು ದುರ್ಬಲಗೊಳಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ.
ಇದೀಗ ದುರಂತ ಎಂಬಂತೆ ಕೇಂದ್ರ ಸರ್ಕಾರವು ಜನರ ಬದುಕಿಗೆ ಸದಾ ನೆರವಾಗಿರುವ ಮತ್ತು ಕರೋನಾದಂತಹ ಸಮಯದಲ್ಲಿ ಜನ ಸಾಮಾನ್ಯರ ಅನ್ನದ ಮಾರ್ಗವೇ ಆಗಿದ್ದ ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ, ಯೋಜನೆಯ ಹೆಸರು ಬದಲಾಯಿಸುವ ನೆಪದಲ್ಲಿ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರಿಸುವ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸರ್ಕಾರವು ಗಾಂಧಿ ವಿರೋಧಿಯಾಗಿಯೂ ಮತ್ತು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವದ ವಿರೋಧಿಯಾಗಿಯೂ ತನ್ನ ನಡವಳಿಕೆ ಮುಂದುವರೆಸಿದೆ. ದೇಶದ ಆರ್ಥಿಕ ವ್ಯವಸ್ಥೆ ಸಮಸ್ಯೆಗೆ ಟಾನಿಕ್ ನಂತಿದ್ದ ನರೇಗಾ ಯೋಜನೆಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ, ರಾಜೀವ್ ಗಾಂಧಿಯವರ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯ್ತಿಗಳಿಗೆ ಇದ್ದಂತಹ ಸ್ವಾತಂತ್ರ್ಯವನ್ನು ಕಿತ್ತುಹಾಕಿ, ಜನ ವಿರೋಧಿ ಕಾರ್ಯಕ್ಕೆ ‘ರಾಮನ ಯೋಜನೆ’ ಎಂದು ಹೆಸರಿಟ್ಟಿದ್ದಾರೆ.
ರಾಜ್ಯಗಳ ಮೇಲೆ ಆರ್ಥಿಕ ಹೊರೆ
ಇಲ್ಲಿಯವರೆಗೆ ಸಂಪೂರ್ಣ ಕೂಲಿ ಪಾವತಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿತ್ತು. ರಾಜ್ಯ ಸರ್ಕಾರವು ಕೇವಲ ಸಾಮಗ್ರಿಗಳ ಒಟ್ಟಿ ವೆಚ್ಚದಲ್ಲಿ ಶೇ.25 ಅಷ್ಟನ್ನು ಮಾತ್ರವೇ ಭರಿಸುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರವು ದಿಢೀರನೇ ಕರ್ನಾಟಕದಂತಹ ರಾಜ್ಯಗಳಿಗೆ ಶೇ.60 ಕೊಡುತ್ತೇವೆ, ಉಳಿದಂತೆ ಶೇ.40 ಹಣವನ್ನು ರಾಜ್ಯಗಳು ಕೊಡಬೇಕೆಂಬ ಬಾಂಬ್ ಅನ್ನು ಹಾಕಿದ್ದು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹಾಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ವಿಪರೀತ ತೆರಿಗೆ ಸಂಗ್ರಹ ಮಾಡಿಯೂ ಮತ್ತೆ ಮತ್ತೆ ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹಾಕುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಮೂಲ ಸ್ವರೂಪವನ್ನು ಬದಲಿಸದೇ, ಗಾಂಧೀಜಿಯ ಹೆಸರನ್ನು ಯೋಜನೆಗೆ ಮರು ನಾಮಕರಣ ಮಾಡುವ ಮೂಲಕ ತಮ್ಮ ದೇಶ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಲಿ ಎಂದು ಅವರು ಆಗ್ರಹಿಸಿದ್ದಾರೆ.

