ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಒಗ್ಗಟ್ಟಾಗಿದ್ದಾರೆ. ಯಾರು ಏನೇ ಮಾಡಿದರೂ ಅವರಿಬ್ಬರ ಒಗ್ಗಟ್ಟು 5 ವರ್ಷ ಹೀಗೆ ಇರುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಜು.05): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಗ್ಗಟ್ಟಾಗಿದ್ದಾರೆ. ಯಾರು ಏನೇ ಮಾಡಿದರೂ ಅವರಿಬ್ಬರ ಒಗ್ಗಟ್ಟು 5 ವರ್ಷ ಹೀಗೆ ಇರುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಬದಲಾವಣೆ ಆಗಲಿದೆ ಎಂಬ ಕೆಲ ಶಾಸಕರ ಹೇಳಿಕೆ ಕುರಿತು ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅದು ಅವರವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ಸಿಎಂ ಮತ್ತು ಡಿಸಿಎಂ ಬಹಳ ಅನ್ಯೊನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದ್ರು ವಿಭಜಿಸಲು ಆಗಲ್ಲ ಎಂದರು.
5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರದ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ನಡುವೆ ಮಾತುಕತೆ ನಡೆದಿರುವುದು ನಮಗೆ ಗೊತ್ತಿಲ್ಲ. ನಮ್ಮ ಸರ್ಕಾರ 5 ವರ್ಷ ಇರುತ್ತದೆ. ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ? ಬೇಡವಾ? ಎನ್ನುವದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು. ರಣದೀಪ್ ಸಿಂಗ್ ಸುರ್ಜೆವಾಲಾ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬಂದು 2 ವರ್ಷ ಆಗಿದ್ದು, ಜನಪರವಾಗಿ ನಮ್ಮ ಕೆಲಸ ಮಾಡುತ್ತಿದೆ. ಹೆಚ್ಚಿನ ಕೆಲಸ ಮಾಡಲು ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಲು ಬಂದಿದ್ದರು. ಜೊತೆಗೆ ಶಾಸಕರ ಅಭಿಪ್ರಾಯ ಕೇಳಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ವಿಶೇಷ ಅನುದಾನ ತರಲಿ: ಕೆಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಸಂಸದರಿಗೆ ಬರುವ ₹5 ಕೋಟಿ ಅನುದಾನದಲ್ಲಿಯೇ ಆಟೋ ನಿಲ್ದಾಣಕ್ಕೆ ₹30 ಲಕ್ಷ ಕೊಟ್ಟಿದ್ದಾರೆ. ಈ ಕೆಲಸವನ್ನ ಸುಮಲತಾ ಸಹ ಮಾಡಿದ್ದರು. ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಇಬ್ಬರೂ ರಾಜ್ಯಕ್ಕೆ ಬರಬೇಕಾದ ಟ್ಯಾಕ್ಸ್ ಹಣ ಕೊಡಿಸಲಿ. ಅದನ್ನು ಬಿಟ್ಟು ಎಂಪಿ ಫಂಡ್ ತಂದರೆ ಅದರಲ್ಲೇನು ವಿಶೇಷ ಇದೆ? ಕುಮಾರಸ್ವಾಮಿ ಅವರು ವಿಶೇಷ ಅನುದಾನ ತಂದು ಮಂಡ್ಯ ಜಿಲ್ಲೆಯನ್ನು ಅಭಿವೃದ್ದಿ ಮಾಡಲಿ. ಅವರು ಏನೇ ಯೋಜನೆ ತಂದರೂ ನಮ್ಮ ಬೆಂಬಲ ಇರುತ್ತದೆ ಎಂದರು.
ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗಿಲ್ಲ: ಪಂಚ ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸ ಬರಿದಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹದಿನಾರು ವರ್ಷಗಳ ಆಯವ್ಯಯ ಮಂಡನೆಯ ಅನುಭವದಿಂದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ಸು ಕಂಡಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿಗಳನ್ನು ಸರ್ಕಾರ ಘೋಷಿಸಿದ ಸಂದರ್ಭದಲ್ಲಿ ವಿಪಕ್ಷಗಳು ಆರ್ಥಿಕ ಸ್ಥಿತಿಗತಿ ತಿಳಿಯದೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದು ಕಷ್ಟ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಟೀಕಿಸಿದ್ದವು. ಆದರೆ, ಇಂದು ಪಂಚ ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 16 ವರ್ಷಗಳ ಆಯವ್ಯಯ ಮಂಡನೆಯ ಅನುಭವದೊಂದಿಗೆ ಗ್ಯಾರಂಟಿ ಯೋಜನೆಗಳು ಯಶಸ್ಸು ಕಂಡಿವೆ. ಸರ್ಕಾರವು ಸದಾ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸದಲ್ಲಿ ನಿರತವಾಗಿದೆ. ಆದರೆ, ಅದನ್ನು ಪ್ರಚಾರ ಮಾಡುವ ಕೆಲಸದಲ್ಲಿ ಹಿಂದುಳಿದಿದೆ ಎಂದರು.


