ಹೊಸ ವರ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ (ಡಿ.24): ಹೊಸ ವರ್ಷದ ಆರಂಭದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತವಾಗಿದ್ದು, ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರು ನನಗೆ ಈ ಬಾರಿ ಅವಕಾಶ ಮಾಡಿಕೊಡುತ್ತಾರೆ ಎಂಬ ಬಲವಾದ ನಂಬಿಕೆಯಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದು ತಿಳಿಸಿದರು.
ಯಾವ ಕ್ರಾಂತಿಯೂ ನಡೆದಿಲ್ಲ, ಎಲ್ಲವೂ ಸುಳ್ಳು
ರಾಜ್ಯ ರಾಜಕಾರಣದಲ್ಲಿ ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದ 'ಸರ್ಕಾರ ಪತನ' ಅಥವಾ 'ಕ್ರಾಂತಿ'ಯ ವಿಚಾರವಾಗಿ ಲೇವಡಿ ಮಾಡಿದ ಅಜಯ್ ಸಿಂಗ್, 'ವಿರೋಧ ಪಕ್ಷದವರು ಸೆಪ್ಟೆಂಬರ್ ಕ್ರಾಂತಿ ಎಂದರು, ಬಳಿಕ ನವೆಂಬರ್ ಕ್ರಾಂತಿ ಎಂದರು. ಈಗ ಡಿಸೆಂಬರ್ ಮುಗಿಯುತ್ತಾ ಬಂದಿದೆ. ಇದುವರೆಗೆ ಯಾವುದಾದರೂ ಕ್ರಾಂತಿ ನಡೆದಿದೆಯೇ? ಸರ್ಕಾರ ಸುಭದ್ರವಾಗಿದೆ' ಎಂದು ಟಾಂಗ್ ನೀಡಿದರು.
ನಾಯಕತ್ವ ಬದಲಾವಣೆ ಗೊಂದಲವಿಲ್ಲ
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವಿಬ್ಬರೂ ಸಹೋದರರಂತೆ (Brothers) ಇದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಆಡಳಿತ ನಡೆಯುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿಲ್ಲ' ಎಂದು ಸ್ಪಷ್ಟಪಡಿಸಿದರು.
ಸುದರ್ಶನ್ ಪತ್ರ ಅವರ ವೈಯಕ್ತಿಕ ವಿಚಾರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಧಾನ ಪರಿಷತ್ ಸದಸ್ಯ ಸುದರ್ಶನ್ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಡಾ. ಸಿಂಗ್, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಮತ್ತು ಪತ್ರ ಬರೆಯಬಹುದು. ಅದು ಅವರ ವೈಯಕ್ತಿಕ ವಿಚಾರ. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಸುಪ್ರೀಂ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯದವರೇ ಆಗಿರುವುದರಿಂದ ಅವರಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಆಳವಾದ ಅರಿವಿದೆ. ಗೊಂದಲಗಳನ್ನು ಪರಿಹರಿಸುವ ಶಕ್ತಿ ಅವರಿಗಿದೆ' ಎಂದು ಹೇಳಿದರು.


