ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲನೇ ಹಂತ ಪೂರ್ಣ ಮಾಡಲು ಕಾಂಗ್ರೆಸ್ 50 ವರ್ಷ ತೆಗೆದುಕೊಂಡಿದ್ದು, ಎರಡನೇ ಹಂತದ ಯೋಜನೆ ಕೂಡಾ ಪೂರ್ಣ ಮಾಡಲು ಆಗಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹಾವೇರಿ (ಡಿ.21): ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ. ಪಡೆದಿದ್ದಾರೆ. ಉತ್ತರ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯ ಆಗಿರುವುದು ಕಾಂಗ್ರೆಸ್ಸಿನಿಂದ, ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲನೇ ಹಂತ ಪೂರ್ಣ ಮಾಡಲು ಕಾಂಗ್ರೆಸ್ 50 ವರ್ಷ ತೆಗೆದುಕೊಂಡಿದ್ದು, ಎರಡನೇ ಹಂತದ ಯೋಜನೆ ಕೂಡಾ ಪೂರ್ಣ ಮಾಡಲು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ ಮಾಡಿದ್ದು ಬಿಜೆಪಿ ಎಂಬ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದವರು ಕೇಸ್ ಹಾಕಿದ್ರು, ನಾವು ಕಳೆದ ಬಾರಿ ಅಸೆಂಬ್ಲಿಯಲ್ಲಿ ಗಲಾಟೆ ಮಾಡಿದ ಮೇಲೆ ಇವರು ಕೇಸ್ ಹಾಕಿದ್ದಾರೆ ಎಂದರು. ಒಪ್ಪಂದದಂತೆ ಸಿಎಂ ನಡೆದುಕೊಳ್ತಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಆಟ ಹೈಕಮಾಂಡ್ ಆಡಿಸುತ್ತಿದೆ. ಹೈಕಮಾಂಡೇ ಇಬ್ಭಾಗ ಆಗಿದೆ.
ಕಾಂಗ್ರೆಸ್ ಹೈಕಮಾಂಡ್ ಎರಡು ಗುಂಪಾಗಿದೆ. ಹೀಗಾಗಿ ಯಾವುದೇ ನಿರ್ಣಯ ತಗೆದುಕೊಳ್ಳಲು ಆಗುತ್ತಿಲ್ಲ. ಇಬ್ಬರ ನಡುವೆ ಜಗಳ ಹಚ್ಚಿ ಎಲ್ಲಿವರೆಗೂ ಲಾಭ ತಗೊಳೋಕೆ ಆಗುತ್ತದೆಯೋ ತೆಗೆದುಕೊಳ್ಳುತ್ತಾರೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ತರ ಬಳಕೆ ಮಾಡುತ್ತಾರೆ ಅಷ್ಟೆ ಎಂದು ಹೇಳಿದರು. ಆರ್‌ಎಸ್‌ಎಸ್ ಮಾದರಿ ಸಂಘ ರಚನೆ ಮಾಡುವುದಾಗಿ ಕಾಂಗ್ರೆಸ್ ಎಂ.ಎಲ್ ಸಿ ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ಮಾದರಿ ಸಂಘಟನೆ ಮಾಡುತ್ತಾರೆ ಅಂದರೆ ಯಾರು ಬೇಡ ಅಂದರು, ಮಾಡಲಿ ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ, ಉಳಿಯುವ ಧರ್ಮ
ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದು ಎಂದು ಜೈನ ಧರ್ಮ ಹೇಳುತ್ತದೆ. ಜೈನ ಧರ್ಮದ ಆಚರಣೆ ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಹಾಗೂ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ್ ಮಂದಿರ ಕಮಿಟಿ ವತಿಯಿಂದ ಏರ್ಪಡಿಸಿದ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಹಾಗೂ ಪಿಂಛಿ ಪರಿವರ್ತನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಬದುಕು ಒಂದು ಸಂಘರ್ಷ. ಹುಟ್ಟಿದ ಮನುಷ್ಯ ಸಾಯುವವರೆಗೂ ಪ್ರತಿಯೊಂದು ಉಸಿರಾಟದಲ್ಲಿ ಪ್ರಯತ್ನ ಮಾಡಬೇಕು, ಆ ಪ್ರಯತ್ನ ನಮಗೆ ಗೊತ್ತಾಗುವುದಿಲ್ಲ. ಉಸಿರಾಡುವ ಪ್ರಾಣ ಪ್ರಕ್ರಿಯೆಯನ್ನು ಭಗವಂತ ನಡೆಸುತ್ತಾನೆ, ಯಾವುದನ್ನು ಭಗವಂತ ನಡೆಸುತ್ತಾನೆ ಅದು ಗೊತ್ತಾಗುವುದಿಲ್ಲ. ನಾವು ಮಾಡುವ ಪ್ರಯತ್ನಕ್ಕೆ ಆಯಾಸ ಇದೆ. ಕೋಟಿಗಟ್ಟಲೆ ಉಸಿರಾಟ ಮಾಡಿಸುವ ಭಗವಂತ ಎಷ್ಟು ಶ್ರೇಷ್ಠವಾಗಿರಬೇಕು. ಉಸಿರಾಟವನ್ನು ಹೇಗೆ ಮಾಡಬೇಕೆಂದು ಹೇಳುವುದು ಜೈನ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದು ಎಂದು ಜೈನ ಧರ್ಮ ಹೇಳುತ್ತದೆ. ಬದುಕು ಹೇಗೆ ನಡೆಸಬೇಕೆಂದು ಹೇಳಿ ಕೊಟ್ಟಿದ್ದಾರೆ. ಆ ಬದುಕಿನ ಉಸಿರಾಟದ ಬಗ್ಗೆ ಜೈನ ಧರ್ಮ ಹೆಳುತ್ತದೆ. ಗುರುಗಳು ಹೇಳಿದಂತೆ ಜೈನ ಧರ್ಮದ ಆಚರಣೆಗಳನ್ಬು ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ. ಅಹಿಂಸೆಯೇ ಪರಮೋ ಧರ್ಮ. ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮ. ನಿಸರ್ಗದಲ್ಲಿ ಒಂದು ಪಕ್ಷಿ, ಕ್ರಿಮಿ ಪ್ರಾಣಿಗಳಿಗೆ ತನ್ನದೇ ರೀತಿಯಲ್ಲಿ ಬದುಕಲು ಭಗವಂತ ಅವಕಾಶ ಕೊಟ್ಟಿದ್ದಾನೆ ಎಂದು ಹೇಳಿದರು.

