ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಒಳಜಗಳ ಹಚ್ಚುವುದು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ದಲಿತರನ್ನು ಮುಖ್ಯಮಂತ್ರಿ ಮಾಡಲ್ಲ. ಅವರೇನಿದ್ದರೂ ಮತ ಬ್ಯಾಂಕ್ ಆಗಿ ಉಪಯೋಗ ಆಗುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಹುಬ್ಬಳ್ಳಿ (ಅ.24): ಕಾಂಗ್ರೆಸ್ ಯಾವುದೇ ಕಾರಣಕ್ಕೂ ದಲಿತರನ್ನು ಮುಖ್ಯಮಂತ್ರಿ ಮಾಡಲ್ಲ. ಅವರೇನಿದ್ದರೂ ಮತ ಬ್ಯಾಂಕ್ ಆಗಿ ಉಪಯೋಗ ಆಗುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸತೀಶ ಜಾರಕಿಹೊಳಿ ಸಿಎಂ ಮಾಡುವುದಿಲ್ಲ. ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಒಳಜಗಳ ಹಚ್ಚುವುದು. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲು 40 ವರ್ಷ, ಜಿ. ಪರಮೇಶ್ವರ್ 20 ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಆದರೂ ಆಗಿಲ್ಲ. ಕಾಂಗ್ರೆಸ್ಸಿಗೆ ದಲಿತರನ್ನು ಸಿಎಂ ಮಾಡುವ ಉದ್ದೇಶವೂ ಇಲ್ಲ. ಸ್ವಾತಂತ್ರ್ಯ ಸಿಕ್ಕಾಗಿನಿಂದ ಈ ವರೆಗಿನ ಆಡಳಿತದಲ್ಲಿ ಮಾಡದೆ ದಲಿತರಿಗೆ ಮೋಸ ಮಾಡುತ್ತಲೇ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
35 ವರ್ಷಗಳಿಂದ ಎಸ್ಸಿ ಜನಾಂಗಕ್ಕೆ ಒಳ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರ, ಹೈಕಮಾಂಡ್ 2023ರಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರು. ಪ್ರಧಾನಿ ನರೇಂದ್ರ ಮೋದಿ ಅವರು ಒಳ ಮೀಸಲಾತಿಗೆ ನಾವು ಬದ್ಧರಿದ್ದೇವೆ ಎಂದು ಹೇಳಿದರು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆದೇಶಿಸಿತು. ಆದರೆ, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಅನುಷ್ಠಾನ ತರಲು ಸಿದ್ಧವಿಲ್ಲ. ಕಣ್ಣೊರೆಸುವುದು, ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಕಲಿ ಮತದಾನ ಮಾಡಿಸುವವರೇ ಕಾಂಗ್ರೆಸ್ಸಿಗರು
ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂಬುದನ್ನು ಸಮೀಕ್ಷೆ ನಡೆಸಿ ಅವರಿಗೆ ಮಾತ್ರ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಯಾರು ಸ್ಪರ್ಧಿಸುತ್ತಾರೆಂಬುದು ಈಗಲೇ ಚರ್ಚೆ ಮಾಡುವುದು ಬೇಡ. ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಕೇಂದ್ರ ಚುನಾವಣೆ ಆಯೋಗ 1987ರ ನಂತರ ಜನಿಸಿದರವರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಹಮ್ಮಿಕೊಂಡಿದೆ. ಕಾರಣ ಬಿಜೆಪಿಯ ಬಿಎಲ್ಎ-2ರ ಸದಸ್ಯರು ತಮ್ಮ ವಾರ್ಡುಗಳಿಗೆ ತೆರಳಿ, ಪ್ರತಿ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಆಯಾ ಕುಟುಂಬದ ಸದಸ್ಯರು ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಹೆಸರುಗಳನ್ನು, ಹೊಸದಾಗಿ ಸೇರಿಸಬೇಕಾದ ಅರ್ಹ ಮತದಾರರು, ಹೆಸರು ತಿದ್ದುಪಡಿ ಮಾಡುವುದಾಗಲಿ, ನಕಲಿ ಮತದಾರರು ಸೃಷ್ಟಿ ಆಗದಂತೆ ತಾವು ನೋಡಿಕೊಳ್ಳಬೇಕು.
ಯಾವ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಇದು ತಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ ಆಗಿದೆ. ನವೆಂಬರ್ ತಿಂಗಳಲ್ಲಿ ಕಾರ್ಯಾರಂಭವಾಗಲಿದೆ. ಕನಿಷ್ಠ ಮೂರು ತಿಂಗಳವರೆಗೆ ನಡೆಯಲಿದೆ. ಹೆಚ್ಚಿನ ಮುತುವರ್ಜಿ ವಹಿಸಿ ಜವಾಬ್ದಾರಿಯುತ ಕೆಲಸ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುಔಊದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.
ಹಾಗಾದರೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಹೇಗೆ ಹೆಚ್ಚಾಯ್ತು ಎಂದು ಪ್ರಶ್ನಿಸಿದರು.ಕೇಂದ್ರ ಚುನಾವಣೆ ಆಯೋಗ ಮತದಾರರ ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ನಂತರ ನಡೆಯುವ ಚುನಾವಣೆಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ನಕಲಿ ಮತದಾನ ಮಾಡಿಸುವವರೆ ಕಾಂಗ್ರೆಸ್ ನವರು ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಕಾರಜೋಳ ಹೇಳಿದರು. ಬಿಜೆಪಿ ಮುಖಂಡ ಬಸವರಾಜ ಮಳಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಎಲ್ಎ-2ರ ಸದಸ್ಯರು ಜವಾಬ್ದಾರಿಗಳೇನು ಎಂಬುದರ ಕುರಿತು ತಿಳಿಸಿಕೊಟ್ಟರು.


