ನನಗೆ ರೈತರ ವಿಚಾರದಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳಲು ಆಸಕ್ತಿ ಇಲ್ಲ. ಕೃಷಿ ಸಚಿವನಾಗಿ ರೈತರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಆ.09): ರೈತರ ಹೆಸರಲ್ಲಿ ರಾಜಕಾರಣ ಮಾಡಲು ಮುಂದಾಗಿರುವ ವಿರೋಧ ಪಕ್ಷಗಳಿಗೆ ಮುಂಬರುವ ಅಧಿವೇಶನದಲ್ಲಿ ಸರಿಯಾದ ಉತ್ತರ ಕೊಡುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ರೈತರ ವಿಚಾರದಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳಲು ಆಸಕ್ತಿ ಇಲ್ಲ. ಕೃಷಿ ಸಚಿವನಾಗಿ ರೈತರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ. ಆದರೆ, ವಿರೋಧ ಪಕ್ಷಗಳು ನಮ್ಮನ್ನು ಕೆಣಕಿ ಕೆಣಕಿ ಎಳೆದು ತರುತ್ತಿವೆ. ಹೀಗಾಗಿ ವಿಧಿ ಇಲ್ಲದೆ ನಾವು ಅವರ ಕೇಂದ್ರ ಸರ್ಕಾರದ ವೈಫಲ್ಯಗಳು, ಇವರ ಅನಾವಶ್ಯಕ ಮಾತುಗಳನ್ನೂ ಎಳೆಯಬೇಕಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ಸಂಸದ ಯೋಚಿಸಿ ಮಾತಾಡಿ: ಬಿಜೆಪಿ ಸಂಸದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಯೂರಿಯಾ ಗೊಬ್ಬರ ಪೂರೈಸುವಂತೆ ಮನವಿ ಮಾಡಿದ್ದರು. ಇದಾದ ನಾಲ್ಕೇ ದಿನಕ್ಕೆ ನಮ್ಮ ಗ್ರೇಟ್ ಇಂಟರ್ ನ್ಯಾಷನಲ್ ಲೋಕಸಭಾ ಸದಸ್ಯರು ಕರ್ನಾಟಕಕ್ಕೆ ಯೂರಿಯಾ ಗೊಬ್ಬರ ಕೊಟ್ಟಾಗಿದೆ. ಆದರೆ, ರಾಜ್ಯ ಸರ್ಕಾರ ಸರಿಯಾಗಿ ವಿತರಿಸುತ್ತಿಲ್ಲ ಎಂದು ಮಾತನಾಡಿದ್ದಾರೆ. ದಡ್ಡರಾದರೆ ತಪ್ಪಾಗುವುದು ಸಹಜ, ಆದರೆ ಅತೀ ಬುದ್ಧಿವಂತರಾದರೆ ದಡ್ಡರಿಗಿಂತ ಹೆಚ್ಚು ತಪ್ಪಾಗುತ್ತದೆ. ಮಾತನಾಡುವಾಗ ಸರಿಯಾಗಿ ಯೋಚಿಸಿ ಮಾತನಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.
ಈ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಬರಬೇಕು: ರಾಜ್ಯಕ್ಕೆ ಜುಲೈ ಅಂತ್ಯದ ವರೆಗೆ 1.27 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬಾಕಿ ಇತ್ತು. ಬಿಜೆಪಿ ನಿಯೋಗ ಕೇಂದ್ರ ಸಚಿವರಿಗೆ ಮನವಿ ಮಾಡಿದ ಬಳಿಕ ಜುಲೈ ಅಂತ್ಯದ ವೇಳೆಗೆ 25 ಸಾವಿರ ಮೆಟ್ರಿಕ್ ಟನ್ ಬಂದಿದೆ. ಆಗಸ್ಟ್ ತಿಂಗಳಲ್ಲಿ 2.28 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬರಬೇಕು. ಈ ತಿಂಗಳಲ್ಲಿ ಈವರೆಗೆ 35 ಸಾವಿರ ಮೆಟ್ರಿಕ್ ಟನ್ ಮಾತ್ರ ಬಂದಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಜೋಳ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಪೂರ್ವ ಮುಂಗಾರು ಉತ್ತಮವಾಗಿದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೂ ನಾವು ರೈತರಿಗೆ ಕೊಡುತ್ತಿದ್ದೇವೆ. ಕಾಲಕಾಲಕ್ಕೆ ತರಿಸಿ ಕೊಡುವುದಾಗಿಯೂ ಹೇಳಿದ್ದೇವೆ. ಈ ನಡುವೆ ಬಿಜೆಪಿ ನಾಯಕರು ಗೊಂದಲದ ಹೇಳಿಕೆ ನೀಡಿ ರೈತರು ಮುಂಗಡವಾಗಿ ಗೊಬ್ಬರ ಖರೀದಿಸಲು ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದರು.
ಗೊಬ್ಬರ ತಲುಪಿಸುವುದಷ್ಟೇ ನಮ್ಮ ಕೆಲಸ: ಕೇಂದ್ರ ಸರ್ಕಾರದಲ್ಲಿ ಅವರದೇ ಪ್ರಧಾನಿ ಯೂರಿಯಾ, ಡಿಎಪಿ ಬಳಕೆ ಕಡಿಮೆ ಎನ್ನುತ್ತಾರೆ. ಅವರೇ ರಫ್ತು ಮಾಡಿ ರಾಜ್ಯಗಳಿಗೆ ಹಂಚಿಕೆ ಮಾಡುತ್ತಾರೆ. ಅಲ್ಲಿಂದ ಬಂದ ಗೊಬ್ಬರವನ್ನು ರೈತರಿಗೆ ತಲುಪಿಸುವುದು ನಮ್ಮ ಕೆಲಸ. ಆದರೆ, ರಾಜ್ಯದಲ್ಲಿ ವಿರೋಧ ಪಕ್ಷಕ್ಕೆ ಮಾಡಲು ಕೆಲಸ ಇಲ್ಲದೆ ರೈತರ ಮೇಲೆ ರಾಜಕಾರಣ ಮಾಡಲು ಮುಂದಾಗಿದೆ ಎಂದು ಇದೇ ವೇಳೆ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.


