ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಪಕ್ಷಾಂತರದ ಊಹಾಪೋಹಗಳು ಹೆಚ್ಚಾಗಿದ್ದು, ಮುಂದಿನ ರಾಜಕೀಯ ನಡೆ ಏನೆಂಬ ಕುತೂಹಲ ಮೂಡಿದೆ. ಕೇಸರಿ ಶಾಲು ಧರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಪ್ರಮೋದ್ ಮುತಾಲಿಕ್ ಮೋಟಮ್ಮ ಅವರ ಧಾರ್ಮಿಕ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

DID YOU
KNOW
?
ಶಾಸಕಿ ನಯನಾ ಮೋಟಮ್ಮ ಯಾರು?
ಖುದ್ದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಮದ್ವಗೆ ಆಗಮಿಸಿ ಆಶೀರ್ವದಿಸಿದ್ದ, ಮಾಜಿ ಸಚಿವೆ ಮೋಟಮ್ಮರ ಮಗಳು. ಕಾಂಗ್ರೆಸ್‌ ಪಕ್ಷದಿಂದ ಚಿಕ್ಕಮಗಳೂರಿನ ಮೂಡಿಗೆರೆ ಶಾಸಕಿ

ಚಿಕ್ಕಮಗಳೂರು: ರಾಜ್ಯದ ರಾಜಕೀಯ ವಲಯದಲ್ಲಿ ದಲಿತ ಮುಖ್ಯಮಂತ್ರಿ ಸ್ಥಾನ ಕುರಿತು ಚರ್ಚೆ ಜೋರಾಗಿರುವ ಈ ಸಮಯದಲ್ಲಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ (Nayana Motamma) ನೀಡಿದ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಲೋಗೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಅವರು, ಪಕ್ಷಾಂತರದ ಕುರಿತು ಮಾತನಾಡುತ್ತಾ, ನಾನು ಬಿಜೆಪಿಗೆ ಹೋಗ್ತೀನೋ, ಕಾಂಗ್ರೆಸ್‌ನಲ್ಲೇ ಉಳೀತೀನೋ, ಅಥವಾ ಬಿಎಸ್ಪಿ, ಎಸ್ಡಿಪಿಐಗೆ ಹೋಗ್ತೀನೋ ಎಂಬ ಪ್ರಶ್ನೆಗೆ ಈಗಲೇ ಉತ್ತರ ನೀಡಲಾರೆ. ಮೂರು ವರ್ಷ ಕಾಯೋಣ, ನಂತರ ನೋಡುವೆವು ಎಂದು ಹೇಳಿಕೆ ನೀಡಿದರು.

ತಮ್ಮ ಮಾತು ಮುಂದುವರಿಸಿದ ಅವರು, ಈಗ ನಾನು ಕಾಂಗ್ರೆಸ್ ಪಕ್ಷದ ಶಾಸಕಿ ಆಗಿ ಇಲ್ಲಿ ನಿಂತಿದ್ದೇನೆ. ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ದೇವರು ನನ್ನನ್ನು ಮೂಡಿಗೆರೆಯಲ್ಲಿ ಹುಟ್ಟಿಸಿದ್ದಾನೆ. ಆ ಅಸ್ತಿತ್ವವೇ ನನ್ನನ್ನು ಈ ಹಂತಕ್ಕೆ ತಂದಿದೆ. ನಾನು ಈಗ ಶಾಸಕಿ ಎಂಬುದು ಸತ್ಯ, ಆದರೆ ನಾನು ಪ್ರತಿನಿಧಿಸುವುದು ಧರ್ಮದ ಶ್ರದ್ಧೆಯೊಂದಿಗೆ ಎಂದು ನಯನಾ ಮೋಟಮ್ಮ ಹೇಳಿದರು.

Scroll to load tweet…

ಕೇಸರಿ ಶಾಲು ಧರ್ಮಕ್ಕಾಗಿ, ರಾಜಕೀಯಕ್ಕಾಗಿ ಅಲ್ಲ

ನಾನು ಇಂದು ಇಲ್ಲಿಗೆ ಕೇಸರಿ ಶಾಲು (Nayana Motamma saffron Shawl Sparks) ಹಾಕಿಕೊಂಡು ಬಂದಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ. ನನ್ನೊಂದಿಗೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಇಲ್ಲಿಗೆ ಆಗಮಿಸಿದ್ದಾರೆ. ಇದು ರಾಜಕೀಯ ವೇದಿಕೆ ಅಲ್ಲ, ಧಾರ್ಮಿಕ ಆಚರಣೆ ಎಂದು ಅವರು ಸ್ಪಷ್ಟಪಡಿಸಿದರು. ನದಿ ಅಂದ್ರೆ ಕಾಂಗ್ರೆಸ್, ದಡ ಅಂದ್ರೆ ಬಿಜೆಪಿ ಅಂತ ಭಾವನೆ ಮಾಡೋದು ತಪ್ಪು. ನಾನು ಇಲ್ಲಿಗೆ ಬಂದಿರುವುದು ಹೃದಯದಿಂದ, ಧರ್ಮಪಾಲನೆಯ ನಿಷ್ಠೆಯಿಂದ. ಇದರೊಂದಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ,” ಎಂದು ಅವರು ತಮ್ಮ ನಿಲುವು ನಿರ್ದಿಷ್ಟಪಡಿಸಿದರು.

ಮೋಟಮ್ಮ ಹೇಳಿಕೆ ಕಾಂಗ್ರೆಸ್ ಕಾಲೆಳೆದ ಜೆಡಿಎಸ್

3 ವರ್ಷಗಳ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ ಎಂಬ ನಯನಾ ಮೋಟಮ್ಮ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್, ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರೇ, ಸಮಯ ವ್ಯರ್ಥ ಮಾಡಬೇಡಿ ಎಂದು ಟಾಂಗ್ ನೀಡಿದೆ. ಜೆಡಿಎಸ್ ತಮ್ಮ ಪೋಸ್ಟ್‌ನಲ್ಲಿ ಮುಂದುವರೆಸಿ, ಕಾಂಗ್ರೆಸ್ ಶಾಸಕರಿಗೇ ತಮ್ಮದೇ ಆದ ಸರ್ಕಾರದ ಮೇಲೆ ನಂಬಿಕೆ ಇಲ್ಲದಿರುವುದು ಈಗ ಸ್ಪಷ್ಟವಾಗಿದೆ. ರಾಜ್ಯವನ್ನು ಕಮಿಷನ್ ಮತ್ತು ಭಯಮುಕ್ತ ಕರ್ನಾಟಕವಾಗಿ ರೂಪಿಸಬೇಕು ಅಂದರೆ, ಎನ್.ಡಿ.ಎ. ಮೈತ್ರಿಕೂಟವನ್ನೇ ಬೆಂಬಲಿಸಬೇಕು ಎಂದು ಹೇಳಿದೆ. 2028ರಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕಾಗಿ ಮೊದಲ ಹೆಜ್ಜೆ ಇಡಲಾಗಿದೆ. ಕಾಂಗ್ರೆಸ್‌ನ ಶಾಸಕರು ಮತ್ತು ಕಾರ್ಯಕರ್ತರು ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಮರೆತೀತು ಎಂದು ಜೆಡಿಎಸ್ ಟ್ವೀಟ್‌ನಲ್ಲಿ ವ್ಯಂಗ್ಯವಾಡಿದೆ.

ನಯನಾ ಮೋಟಮ್ಮ ವಿರುದ್ಧದ ಟೀಕೆಗಳಿಗೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ

ಮೂಡಿಗೆರೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಕೇಸರಿ ಶಾಲು ಹಾಕಿಕೊಂಡು ಭಾಗಿಯಾಗಿದ್ದದನ್ನು ಕುರಿತು ರಾಜಕೀಯ ಟೀಕೆಗಳು ಮುಂದುವರಿದಿರುವ ಮಧ್ಯೆ, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಮುತಾಲಿಕ್, ಸಹಜ ಧಾರ್ಮಿಕ ಕಾರ್ಯಕ್ರಮದಲ್ಲಿ ನಯನಾ ಮೋಟಮ್ಮ ಭಾಗಿಯಾಗಿದ್ದೇ ಆಶ್ಚರ್ಯಕಾರಿಯಾಗಿದೆ. ಅವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಮೊದಲು ನನ್ನ ಧರ್ಮ, ಆಮೇಲೆ ಪಕ್ಷ’ ಎಂಬುದು ಅವರ ನಿಜವಾದ ಧಾರ್ಮಿಕ ನಿಷ್ಠೆ ಎಂದು ಪ್ರಶಂಸಿಸಿದರು. ನಯನಾ ಮೋಟಮ್ಮ ಬಿಜೆಪಿ ಸೇರುತ್ತಾರೆ ಎಂದು ಅವರು ಎಲ್ಲಿಯೂ ಹೇಳಿಲ್ಲ. ಅವರು ಹೇಳಿದಂತೆ, ಧರ್ಮ ಮತ್ತು ದೇಶ ಉಳಿದರೆ ಪಕ್ಷ ಕೂಡ ಉಳಿಯಬಹುದು. ಅವರ ಈ ನಿಲುವಿಗೆ ಅಭಿನಂದನೆಗಳು ಎಂದರು.

ಕೇಸರಿ ಶಾಲು ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ

ಮೋಡುಗೆರೆಯ ಕಾರ್ಯಕ್ರಮದಲ್ಲಿ ನಯನಾ ಮೋಟಮ್ಮ ಧರಿಸಿದ್ದ ಕೇಸರಿ ಶಾಲು ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಸ್ಪಂದಿಸಿದ ಮುತಾಲಿಕ್, “ಕೇಸರಿ ಆರ್‌ಎಸ್‌ಎಸ್, ಬಿಜೆಪಿ ಅಥವಾ ಶ್ರೀರಾಮ ಸೇನೆಯದ್ದೇನಲ್ಲ. ಇದು ಹಿಂದೂ ಧರ್ಮದ, ಸನಾತನ ಸಂಸ್ಕೃತಿಯ ಸಂಕೇತ. ಇದನ್ನು ಬಿಜೆಪಿ ಅಥವಾ ಯಾವುದೇ ಸಂಘಟನೆ ‘ಬ್ರ್ಯಾಂಡ್’ ಮಾಡಿಕೊಳ್ಳುವುದು ಮೂರ್ಖತನ ಎಂದರು.

ಕೇಸರಿ ಅನ್ನೋದು ಸಮೃದ್ಧಿಯ, ತ್ಯಾಗದ ಮತ್ತು ಸಮಾನತೆಯ ಪ್ರತೀಕ. ಇದನ್ನು ಯಾವುದೇ ಧರ್ಮಾಭಿಮಾನಿ ವ್ಯಕ್ತಿ ಧರಿಸಬಹುದಾಗಿದೆ. ಕಾಂಗ್ರೆಸ್‌ನವರೇ ಆಗಲೀ, ಕಮ್ಯುನಿಸ್ಟ್‌ಗಳೇ ಆಗಲೀ ಯಾರಾದರೂ ಧರಿಸಬಹುದು. ಇದಕ್ಕೆ ಯಾರೂ ಗುತ್ತಿಗೆ ಪಡೆದುಕೊಂಡಿಲ್ಲ,” ಎಂದು ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು. ಟೀಕೆ ಮಾಡುವವರು ಬಾಯಿ ಮುಚ್ಚಿ, ಕಿವಿಗೊಟ್ಟು ಕೇಳಬೇಕು. ಧರ್ಮದ ಬಣ್ಣವನ್ನು ರಾಜಕೀಯ ಗೂಡುಗೆ ಹಾಕಬೇಡಿ ಎಂದು ಮುತಾಲಿಕ್ ಎಚ್ಚರಿಸಿದರು.

Scroll to load tweet…