ಮೈಸೂರು ಸ್ಯಾಂಡಲ್ ಗೆ ನಟಿ ತಮನ್ನಾ ಬಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಕ್ಕೆ ನಮ್ಮ ವಿರೋಧ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರು (ಮೇ.26): ಮೈಸೂರು ಸ್ಯಾಂಡಲ್ ಗೆ ನಟಿ ತಮನ್ನಾ ಬಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಕ್ಕೆ ನಮ್ಮ ವಿರೋಧ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ತಮ್ಮನ್ನೇ ಸೋಪ್ಗೆ ರಾಯಭಾರಿಯನ್ನಾಗಿ ಮಾಡಬೇಕು ಎಂದು ಆನ್ಲೈನ್ನಲ್ಲಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಯದುವೀರ್, ‘ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆ ಇಲ್ಲ. ರಾಜಮನೆತನ ಕಮರ್ಷಿಯಲ್ ಆಗಿ ಸೇವೆ ಮಾಡುವುದಿಲ್ಲ. ನಾವು ಸದಾಕಾಲ ಕನ್ನಡದ ಬ್ರಾಂಡ್ಗಳ ಪರವಾಗಿಯೇ ಇರುತ್ತೇವೆ. ಹೀಗಾಗಿ, ನನ್ನ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ಬರುತ್ತಿದ್ದರೂ ಅದಕ್ಕೆ ನನ್ನ ಸಹಮತ ಇಲ್ಲ’ ಎಂದರು.
ಮೈಸೂರು ಸ್ಯಾಂಡಲ್ ಕನ್ನಡಿಗರೇ ಕಟ್ಟಿ ಬೆಳೆಸಿದ ಸಂಸ್ಥೆ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಕನ್ನಡಿಗರನ್ನು ರಾಯಭಾರಿಯಾಗಿ ಮಾಡಬೇಕು. ಸೋಪು ಎಂದ ಕೂಡಲೇ ಹಿರೋಯಿನ್ನೇ ಯಾಕೆ ಬೇಕು?. ಸೋಪ್ಗೆ ಲಿಂಗಭೇದ ಇರುತ್ತದಾ?. ಕ್ರಿಕೆಟಿಗರು, ಒಳ್ಳೆ ನಾಯಕ ನಟರು ರಾಯಭಾರಿ ಆಗಬಹುದಿತ್ತಲ್ಲಾ?. ಇದು ಒಂದು ಅರ್ಥದಲ್ಲಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡಿಗರು ಬಹಳಷ್ಟು ಜನ ಇದ್ದಾರೆ. ಅವರ್ಯಾರೂ ಸರ್ಕಾರದ ಕಣ್ಣಿಗೆ ಕಾಣಲಿಲ್ವಾ?. ಅವರದ್ದೇ ಪಕ್ಷದ ನಟಿ ರಮ್ಯಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರನ್ನೇ ರಾಯಭಾರಿ ಮಾಡಿದ್ದರೇ ಬ್ರಾಂಡಿನ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದರು.
ಮೋದಿ ಹೆಜ್ಜೆ ವಿಶ್ವಕ್ಕೆ ಮಾದರಿ: ಪಹಲ್ಗಾಂ ಹತ್ಯಾಕಾಂಡದ ನರರಾಕ್ಷಸ ಉಗ್ರರ ನರವಧೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸೈನ್ಯ ನಡೆಸಿದ ಕಾರ್ಯಾಚರಣೆಯು ನಿರ್ಧಿಷ್ಟ ಉದ್ದೇಶ ಮತ್ತು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಲ್ಲಿ ಇಟ್ಟ ಹೆಜ್ಜೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ತಾಲೂಕು ಘಟಕದ ವತಿಯಿಂದ ಸೋಮವಾರ ಜಗಜ್ಯೋತಿ ಬಸವೇಶ್ವರರ 134ನೇ ಜಯಂತಿ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


