ಪರಶುರಾಮ ಥೀಮ್ ಪಾರ್ಕ್ ಹಾಗೂ ಅದರ ಪ್ರತಿಮೆಯ ಕುರಿತಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಅಪಪ್ರಚಾರಕ್ಕೆ ಪೊಲೀಸ್ ತನಿಖೆಯ ಬೆಳಕಿನಲ್ಲಿ ಸ್ಪಷ್ಟ ಸೋಲು ಕಂಡಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ (ಜು.15): ಪರಶುರಾಮ ಥೀಮ್ ಪಾರ್ಕ್ ಹಾಗೂ ಅದರ ಪ್ರತಿಮೆಯ ಕುರಿತಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಅಪಪ್ರಚಾರಕ್ಕೆ ಪೊಲೀಸ್ ತನಿಖೆಯ ಬೆಳಕಿನಲ್ಲಿ ಸ್ಪಷ್ಟ ಸೋಲು ಕಂಡಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, ಹಿತ್ತಾಳೆ ಬಳಸಿ ಮಾಡಲಾದ ಪ್ರತಿಮೆ ಫೈಬರ್‌ನಿಂದ ತಯಾರಿಸಲಾಗಿದೆ ಎಂಬುದಾಗಿ ಕಾಂಗ್ರೆಸ್ ವಕ್ತಾರರು ಮತ್ತು ಕೆಲ ಟೂಲ್ ಕಿಟ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಮಿತಿಮೀರಿ ಅಪಪ್ರಚಾರ ನಡೆಸಿದ್ದರು. ಈ ಆರೋಪಗಳ ಬಗ್ಗೆ ತನಿಖೆ ನಡೆಸಿದ ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ, ಪರಶುರಾಮನ ಪ್ರತಿಮೆ ಹಿತ್ತಾಳೆಯಿಂದ ತಯಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸಕ್ಕಾಗಿ ತೆಗೆದು ಇಡಲಾಗಿದ್ದುದೆಂದು ತಿಳಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಈವರೆಗೂ ಅನುಮಾನವನ್ನು ಉಂಟುಮಾಡುತ್ತಿದ್ದ ಫೈಬರ್‌ದು ಎಂಬ ಸುಳ್ಳು ಮಾಹಿತಿ ಸಂಪೂರ್ಣವಾಗಿ ಮಸುಕಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಮ್ ಪಾರ್ಕ್‌ಗೆ ನಿಗದಿ ಮಾಡಿದ್ದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಪವಿತ್ರ ತಾಣವನ್ನು ಪ್ರವಾಸೋದ್ಯಮದ ನಕ್ಷೆಯಲ್ಲಿ ಪುನಃ ಸ್ಥಾಪಿಸಬೇಕು. ಅಭಿವೃದ್ಧಿಯ ವಿಷಯದಲ್ಲಿ ನಡೆಯುವ ದ್ವೇಷ ರಾಜಕಾರಣಕ್ಕೆ ತೆರೆ ಬೀಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಎನ್‌ಐಎ ದಾಳಿ ಬಳಿಕ ಗೃಹ ಇಲಾಖೆ ವೈಫಲ್ಯ ಬೆಳಕಿಗೆ: ರಾಜ್ಯದಲ್ಲಿ ನಡೆದ ಎನ್‌ಐಎ ದಾಳಿ ಪೈಪೋಟಿಯ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ವಿಫಲತೆ ಪತ್ತೆ ಹಚ್ಚಿರುವುದಾಗಿ ಅಭಿಪ್ರಾಯಪಟ್ಟಿರುವ ಮಾಜಿ ಸಚಿವ ಮತ್ತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌ಐಎ ದಾಳಿಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸರು ಮತ್ತು ಕಾರಾಗೃಹ ಸಿಬ್ಬಂದಿಯೊಬ್ಬರೇ ಅಂತಾರಾಷ್ಟ್ರೀಯ ಭಯೋತ್ಪಾದಕರ ಜತೆ ಕೈ ಜೋಡಿಸುತ್ತಿರುವುದು ಸರ್ಕಾರದ ಭದ್ರತಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದರ ಸ್ಪಷ್ಟ ಸಂಕೇತ ಎಂದು ಆರೋಪಿಸಿದರು.
ಭಯೋತ್ಪಾದಕರಿಗೆ ಸಿಬ್ಬಂದಿಯೇ ಬೆಂಬಲ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಮತ್ತು ವಿದೇಶದಲ್ಲಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕರಿಗೆ ಕಾರಾಗೃಹ ಸಿಬ್ಬಂದಿಯೇ ನೆರವಾಗಿರುವುದು ಆತಂಕಕಾರಿ ಸಂಗತಿ. ಇಂಥ ಸಂಬಂಧಗಳ ನಡುವೆಯೂ ರಾಜ್ಯ ಭದ್ರತಾ ದಳ ನಿಶ್ಚಲವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಸರ್ಕಾರ ಭಯೋತ್ಪಾದಕರ ಕುರಿತು ನಯವಾದ ನಿಲುವು ತಾಳುತ್ತಿದೆ ಎಂದಿರುವ ಅವರು, ಹಿಂದು ಕಾರ್ಯಕರ್ತರ ಹತ್ಯೆ ಸೇರಿದಂತೆ ಹಲವು ಜಿಹಾದಿ ಚಟುವಟಿಕೆಗಳ ತನಿಖೆ ನಡೆಸಲು ರಾಜ್ಯ ಪೊಲೀಸರು ನಿರಾಶದಾಯಕ ಸ್ಥಿತಿಯಲ್ಲಿದ್ದಾರೆ. ಪ್ರತಿಬಾರಿಯೂ ಎನ್‌ಐಎ ಅಧಿಕಾರಿಗಳು ಘಟನೆಯ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯುತ್ತಿದ್ದಾರೆ. ಇದರಿಂದ ಸರ್ಕಾರವೇ ಪೊಲೀಸ್ ಅಧಿಕಾರಿಗಳನ್ನು ನಿರುದ್ಯೋಗಿಗಳಂತೆ ಮಾಡುತ್ತಿದ್ದೆಯೆ ಎಂದು ಪ್ರಶ್ನಿಸಿದ್ದಾರೆ.


