ದಶಕದಷ್ಟು ಹಳೆಯದಾದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಸೂದೆ ರದ್ದು ಮಾಡಿ ಜಿ ರಾಮ್‌ ಜಿ ಎಂಬ ಹೊಸ ವಿಧೇಯಕ, ಪರಮಾಣು ವಲಯವನ್ನು ಖಾಸಗಿಗೆ ತೆರೆಯುವ ವಿಧೇಯಕಗಳ ಅಂಗೀಕಾರಕ್ಕೆ ಕಾರಣವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದೆ

ನವದೆಹಲಿ : ದಶಕದಷ್ಟು ಹಳೆಯದಾದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಸೂದೆ ರದ್ದು ಮಾಡಿ ಜಿ ರಾಮ್‌ ಜಿ ಎಂಬ ಹೊಸ ವಿಧೇಯಕ, ಪರಮಾಣು ವಲಯವನ್ನು ಖಾಸಗಿಗೆ ತೆರೆಯುವ ವಿಧೇಯಕಗಳ ಅಂಗೀಕಾರಕ್ಕೆ ಕಾರಣವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದೆ. ಭಾರೀ ಗದ್ದಲ ಹಾಗೂ ವಾಕ್ಸಮರಕ್ಕೆ ಈ ಅಧಿವೇಶನ ಕಾರಣವಾದರೂ ನಿರೀಕ್ಷೆಗೂ ಮೀರಿ ಉತ್ಪಾದಕತೆ ದಾಖಲಿಸಿದೆ.

ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಕಲಾಪ 92 ಗಂಟೆ 25 ನಿಮಿಷಗಳ ಕಾಲ ನಡೆಯಿತು. ಈ ಮೂಲಕ ಶೇ.111ರಷ್ಟು ಉತ್ಪಾದಕತೆ ದಾಖಲಾಗಿದೆ. ಜಿ ರಾಮ್ ಜಿ ವಿಧೇಯಕದ ಚರ್ಚೆಗೆ ಸದಸ್ಯರು ತಡರಾತ್ರಿವರೆಗೂ ಇದ್ದಿದ್ದು ವಿಶೇಷ.

92 ಗಂಟೆಗಳ ಕಾಲ ನಡೆದ ರಾಜ್ಯಸಭೆ ಕಲಾಪ

ಇನ್ನು 92 ಗಂಟೆಗಳ ಕಾಲ ನಡೆದ ರಾಜ್ಯಸಭೆ ಕಲಾಪ, ಶೇ.121 ಉತ್ಪಾದಕತೆ ದಾಖಲಿಸಿದೆ.

ಆದಾಗ್ಯೂ, ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ವೇಳೆ ಸದಸ್ಯರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಭಾಪತಿ ಸಿ.ಪಿ. ರಾಧಾಕೃಷ್ಣನ್, ‘ಗದ್ದಲ ಮಾಡುವ ನಡವಳಿಕೆ ಸಂಸತ್‌ ಸದಸ್ಯರಿಗೆ ತಕ್ಕದ್ದಲ್ಲ. ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಅಂತಹ ನಡವಳಿಕೆಯಿಂದ ದೂರವಿರಬೇಕು’ ಎಂದು ಒತ್ತಾಯಿಸಿದರು.

ಪಿಎಂ ಮೋದಿಗೆ ಸಂಕ್ಷಿಪ್ತ ಹೆಸರಿಡುವ ರೋಗ: ಕಾಂಗ್ರೆಸ್‌

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹೆಸರನ್ನು ವಿಬಿ-ಜಿ ರಾಮ್‌ ಜಿ ಬಿಲ್‌ ಆಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮತ್ತೊಮ್ಮೆ ಕಿಡಿಕಾರಿದೆ. ಪ್ರದಾನಿ ಮೋದಿ ಅವರು ಸಂಕ್ಷಿಪ್ತ ಹೆಸರಿಡುವ ರೋಗದಿಂದ ತೀವ್ರವಾಗಿ ಬಳಲುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ. ಇದೇ ವೇಳೆ, ಸರ್ಕಾರದ ನಡೆ ವಿರುದ್ಧ ಹೋರಾಡುವುದಾಗಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್‌ ಮಾಡಿ, ಹೊಸ ಎ.ಸಿ.ಒ.ಎನ್.ವೈ.ಎಂ. ಮಂತ್ರಾಲಯ್‌ (ಅಡ್ಮಿನಿಸ್ಟ್ರೇಟಿವ್‌ ಕಮಿಷನ್‌ ಫಾರ್‌ ರೀನೇಮಿಂಗ್‌ ಓಲ್ಡ್‌ ಸ್ಕೀಮ್ಸ್‌-ನ್ಯೂ ಯೆಟ್‌ ಮೀನಿಂಗ್‌ಲೆಸ್‌) ಎಂದು ತೋರಿಸುವ ಕಾರ್ಟೂನ್‌ ಅನ್ನು ಟ್ವೀಡ್‌ ಮಾಡಿದ್ದಾರೆ. ಈ ಮೂಲಕ ಮೋದಿ ಅವರು ಕಾಯ್ದೆಗಳ ಉದ್ದೇಶಕ್ಕಿಂತ ಅವುಗಳ ಹೆಸರು ಬದಲಾವಣೆಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

ಸಂಸತ್ತಿನಲ್ಲಿ ಮಂಡನೆಯಾಗಿರುವ ವಿಕಸಿತ್‌ ಭಾರತ್‌ ಗ್ಯಾರಂಟಿ ಫಾರ್‌ ರೋಜ್‌ಗಾರ್‌ ಆ್ಯಂಡ್‌ ಆಜೀವಿಕಾ ಮಿಷನ್‌ (ಗ್ರಾಮೀಣ)(ವಿಬಿ-ಜಿ ರಾಮ್‌ ಜಿ) ವಿಧೇಯಕ ಮತ್ತು ಸಸ್ಟೈನೇಬಲ್‌ ಹಾರ್ನೆಸಿಂಗ್‌ ಆ್ಯಂಡ್‌ ಅಡ್ವಾನ್ಸ್‌ಮೆಂಟ್‌ ಆಫ್‌ ನ್ಯೂಕ್ಲಿಯರ್‌ ಎನರ್ಜಿ ಫಾರ್‌ ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ(ಎಸ್‌ಎಚ್‌ಎಎನ್‌ಟಿಐ- ಶಾಂತಿ ಬಿಲ್‌) ವಿಧೇಯಕವನ್ನು ಮುಂದಿಟ್ಟುಕೊಂಡು ಅವರು ಈ ತಿರುಗೇಟು ನೀಡಿದ್ದಾರೆ.