ರಾಜ್ಯ ಪೊಲೀಸರಿಗೆ ದಕ್ಷತೆ ಇದೆ. ಆದರೆ, ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ. ನಳಪಾಕ್ ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೆ ಪೊಲೀಸರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮೈಸೂರು (ಅ.10): ರಾಜ್ಯ ಪೊಲೀಸರಿಗೆ ದಕ್ಷತೆ ಇದೆ. ಆದರೆ, ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ. ನಳಪಾಕ್ ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೆ ಪೊಲೀಸರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಾಗ್ತಿದೆ ಮೈಸೂರಿನಲ್ಲಿ? ಒಂದರ ಹಿಂದೆ ಒಂದು ಕೊಲೆಗಳು ಆಗ್ತಿವೆ. ಬಾಲಕಿ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಸರ್ಕಾರದ ಯಾರೊಬ್ಬರು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿ ಕೂಗು ಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಡೋನಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಬಾಲಕಿ ಕೊಲೆ ಪ್ರಕರಣ ಬಗ್ಗೆ ಯಾಕೆ ಮಾತಾಡಲ್ಲ?, ಪ್ರಿಯಾಂಕ್ ಖರ್ಗೆ, ಲಾಡ್, ಚಿಕ್ಕಬಳ್ಳಾಪುರದ ಕೂಗು ಮಾರಿ ಇವರಲ್ಲಿ ಒಬ್ಬನಾದರೂ ಬಾಯಿ ತೆರೆಯುತ್ತಿದ್ದಾನಾ? ಸಿಎಂ, ಡಿಸಿಎಂ ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ? ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ನೀವು ಸಿಎಂ ಆಗಿದ್ದೀರಾ ಎಂದು ಕಿಡಿಕಾರಿದರು. ಮಹದೇವಪ್ಪ ಬರೀ ಸಂವಿಧಾನ ಪೀಠಿಕೆ ಓದಿಸೋದು ಬಿಟ್ಟರೆ ಬೇರೆ ಏನೂ ಮಾಡುತ್ತಿದ್ದಾರೆ?, ಹಕ್ಕಿಪಿಕ್ಕಿ ಜನಾಂಗದ ಬಾಲಕಿ ಕೊಲೆಗೆ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲ? ಸಿಎಂಗೆ ಅಂತಃಕಾರಣವೇ ಇಲ್ಲ. ಸಿಎಂ ಹೃದಯ ಕಲ್ಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯೇನು ಶಾಮನೂರು ಕುಟುಂಬ ಆಸ್ತಿನಾ?
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡಿಜೆ ಸಹಿತ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ಮಾಡಿದ್ದಾರೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಇಂದಿರಾ ಗಾಂಧಿ ಮನಸ್ಥಿತಿಯಂತೆ ಡಿ.ಜೆ. ಸೌಂಡ್ ಸಿಸ್ಟಂ ಬಳಕೆಗೆ ನಿರ್ಬಂಧ ಹೇರಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದರು. ಅಧಿಕಾರಸ್ಥ ಶಾಮನೂರು ಕುಟುಂಬ ಹೇಳಿದಂತೆ ಕೇಳುವುದಕ್ಕೆ ದಾವಣಗೆರೆಯೇನು ಶಾಮನೂರು ಕುಟಂಬದ ಆಸ್ತಿಯಾ ಎಂದರು. ಮೈಸೂರು, ಚಿತ್ರದುರ್ಗ, ತುಮಕೂರು, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಡಿ.ಜೆ.ಯೊಂದಿಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆದಿದೆ. ಆದರೆ, ದಾವಣಗೆರೆಯಲ್ಲಿ ಮಾತ್ರ ಡಿಜೆ, ಭಾಜಾಭಜಂತ್ರಿ,ಮೈಕ್ ಸೆಟ್ಗೆಲ್ಲಾ ನಿರ್ಬಂಧ ಹಾಕಲಾಗಿದೆ.
ಏನಿದು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರೇ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರೇ? ದಾವಣಗೆರೆಯನ್ನೇನು ಶಾಮನೂರು ಕುಟುಂಬಕ್ಕೆ ಬರೆದುಕೊಟ್ಟಿದ್ದಾರಾ? ಇದೇನು ನಿಮ್ಮ ಲೇಔಟಾ ಎಂದು ಪ್ರತಾಪ ಸಿಂಹ ಪ್ರಶ್ನಿಸಿದರು. ಗಣೇಶ ಹಬ್ಬಕ್ಕೆ ಒಂದು ಮೈಕ್ ಕಟ್ಟುವುದಕ್ಕೂ ಅವಕಾಶವಿಲ್ಲವೆಂದರೆ ಏನರ್ಥ? ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏನು ಮಾಡಲು ಹೊರಟಿದ್ದಾರೆ? ಪ್ರಾಣಿಗಳನ್ನು ಹೊಡೆದು ಹಾಕಿ ತಿಂದಂತೆ ಅಲ್ಲ. ಇದು ಸಾರ್ವಜನಿಕರಿಗೆ ಸೇರಿದ ಸ್ಥಳ. ಮನಸ್ಸಿಗೆ ಬಂದಂತೆ ಅಧಿಕಾರ ನಡೆಸುವುದಕ್ಕೆ ನಿಮ್ಮ ಫ್ಯಾಕ್ಟರಿ ಅಲ್ಲ. ಗಣೇಶ ಹಬ್ಬ ಭಾಜಾಭಜಂತ್ರಿ, ಸಂಗೀತದೊಂದಿಗೆ ನಡೆಯಬೇಕೆಂಬ ಅರಿವು ನಿಮಗಿಲ್ಲವೇ ಎಂದು ಕಿಡಿಕಾರಿದರು.
ಸುದೀಪ್ ಮೇಲಿನದ್ವೇಷಕ್ಕೆ ಬಿಗ್ ಬಾಸ್ ಬಾಗಿಲು ಹಾಕಿಸಲಾಗಿದೆ. ಇದು ದೌರ್ಜನ್ಯ ಸರ್ಕಾರ. ನಾನು ರಾಜ್ಯ ರಾಜಕಾರಣದಲ್ಲೆ ಇದ್ದೀನಿ. ಲೋಕಸಭೆಯಲ್ಲಿ ಟಿಕೆಟ್ ಕೊಡದವರಿಗೆ ವಿಧಾನಸಭೆ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರು ಡಿಸಿಎಂ ಕೂಡ ಆಗಿದ್ದಾರೆ.
- ಪ್ರತಾಪ್ ಸಿಂಹ, ಮಾಜಿ ಸಂಸದರು


