ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪಗಡೆಯಾಟ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಇದು ಜಾತಿ ಸಮೀಕ್ಷೆ ಅಲ್ಲ, ಹಿಂದುಳಿದಿರುವವರನ್ನು ತಿಳಿದುಕೊಳ್ಳುವುದು ತಪ್ಪಾ?

ಕಲಬುರಗಿ (ಅ.01): ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪಗಡೆಯಾಟ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಜಾತಿ ಸಮೀಕ್ಷೆ ಅಲ್ಲ, ಹಿಂದುಳಿದಿರುವವರನ್ನು ತಿಳಿದುಕೊಳ್ಳುವುದು ತಪ್ಪಾ? ಆ ಮೂಲಕ ಯೋಜನೆಗಳನ್ನು ರೂಪಿಸುವುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರವೇ ಗಣತಿ ಮಾಡಿದರೆ ಈಗ ನಾವು ಈ ಸಮೀಕ್ಷೆ ಮಾಡುವ ಪ್ರಮೇಯ ಬರುತ್ತಿರಲಿಲ್ಲ ಎಂದರು.

ಮೋದಿ ಬಂಡವಾಳ ಬಯಲಾಗುತ್ತೆ ಅಂತ ಅವರು ಮಾಡಿಲ್ಲ, ವಿಶ್ವಗುರು ಸ್ಥಾನ ಕುಸಿದು ಹೋಗುತ್ತೆ ಅಂತ ಅವರು ಮಾಡಿಲ್ಲ, ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇಲ್ಲ. ಹಿಂದುಳಿದ ಆಯೋಗ ಸಮೀಕ್ಷೆ ಮಾಡಬಹುದು, ಈ ಸಮೀಕ್ಷೆ ಮಾಡಿದರೆ ಬಿಜೆಪಿಯವರಿಗೆ ಏನ್ ಕಡಿಯುತ್ತೆ? ಎಂದು ಖಾರವಾಗಿ ಪ್ರಶ್ನಿಸಿದರು. ಪ್ರಹ್ಲಾದ ಜೋಷಿ, ತೇಜಸ್ವಿ ಸೂರ್ಯ ದತ್ತಾಂಶ ಮಾರಾಟದ ಬಗ್ಗೆ ಮಾತನಾಡಿದ್ದಾರೆ, ಸ್ವಲ್ಪವಾದರೂ ಅವರಿಗೆ ಜವಾಬ್ದಾರಿ ಬೇಡವಾ? ಹಾಗಾದರೆ ನೀವು ಸಮೀಕ್ಷೆ ಮಾಡಲು ಹೊರಟಿದ್ದೀರಲ್ವಾ? ಎಷ್ಟಕ್ಕೆ ಮಾರುತ್ತಿದ್ದೀರಿ? ಯಾರಿಗೆ ಮಾರುತ್ತಿದ್ದೀರಿ ಹೇಳಿ ಎಂದು ಖರ್ಗೆ ಪ್ರಶ್ನಿಸಿದರು.

ಚು.ಆಯೋಗ ಸುಳ್ಳು ಮಾಹಿತಿ

ಆಳಂದ ವಿಧಾನ ಸಭಾ ಕ್ಷೇತ್ರದ ಮತ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಸುಳ್ಳು ಮಾಹಿತಿ ನೀಡಿವೆ ಎಂದು ಆರೋಪಿಸಿದರು. 2023ರಲ್ಲಿ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ 6,670 ನಕಲಿ ಅರ್ಜಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿದ್ದವು. ಇದನ್ನು ನಾವು ಆಯೋಗದ ಗಮನಕ್ಕೆ ತಂದಿದ್ದೆವು. ಆದರೆ ಮತಗಳ್ಳತನವನ್ನು ತಡೆಹಿಡಿದಿದ್ದೇವೆ ಎಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಸುಳ್ಳು ಮಾಹಿತಿ ನೀಡಿವೆ. ಆದ್ದರಿಂದ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

2013 ಫೆ.11ರಂದು ಕಲಬುರಗಿಯಲ್ಲಿ ನಾವು ಪತ್ರಿಕಾಗೋಷ್ಠಿ ನಡೆಸಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ 6,670 ಅರ್ಜಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿವೆ ಎಂದು ಬಹಿರಂಗಗೊಳಿಸಿದ್ದೆವು. ನಂತರ ಫೆ.20 ರಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ದೂರು ಸಲ್ಲಿಸಲಾಯಿತು. ಅರ್ಜಿ ಸಲ್ಲಿಸಿದ ಮೊಬೈಲ್ ಸಂಖ್ಯೆಗಳು ಉತ್ತರ ಪ್ರದೇಶ, ಬಿಹಾರ, ಒಡಿಶಾ ಮೂಲದವು. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.