ರಣದೀಪ್‌ಸಿಂಗ್‌ ಸುರ್ಜೇವಾಲಾ ಸೇರಿ ಎಲ್ಲರೂ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಸಂಖ್ಯಾಬಲದ ಚರ್ಚೆ ಯಾಕೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರು (ಜು.12): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಸೇರಿ ಎಲ್ಲರೂ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಸಂಖ್ಯಾಬಲದ ಚರ್ಚೆ ಯಾಕೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದಿರುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರು ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡಿ ನಾಯಕತ್ವ ಬದಲಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿಲ್ಲ, ಅದರ ಚರ್ಚೆಯೇ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಕೂಡ ಹೇಳಿದ್ದಾರೆ. ಮಾಧ್ಯಮದವರು ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಕೇಳುವುದು ಬಿಟ್ಟರೆ ಯಾರೂ ಮಾತನಾಡಲ್ಲ ಎಂದು ಹೇಳಿದರು.

ದೆಹಲಿಗೆ ಹೋಗಬಾರದು, ಹೈಕಮಾಂಡ್ ಭೇಟಿಯಾಗಬಾರದು ಅಂದರೆ ಹೇಗೆ? ನವೆಂಬರ್ ಕ್ರಾಂತಿ, ಸೆಪ್ಟೆಂಬರ್ ‌ಕ್ರಾಂತಿ, ಡಿಸೆಂಬರ್ ಶಾಂತಿ ಎನ್ನುವುದು ವಿಷಯವೇ ಅಲ್ಲ. ಮಾಧ್ಯಮಗಳ ಮುಂದೆ ಪಕ್ಷದ ವಿಚಾರ ಹೇಳಿದರೆ ತೀರ್ಮಾನ ಆಗುವುದಿಲ್ಲ. ಮಾಧ್ಯಮಗಳು ಕೇಳೋದು ನಿಲ್ಲಿಸಿ‌ದರೆ ಎಲ್ಲವೂ ಸರಿ ಆಗುತ್ತದೆ. ಮಾಧ್ಯಮದವರು ಎರಡು ದಿನ ಪ್ರವಾಸಕ್ಕೆ ಹೋಗಿ ಬನ್ನಿ, ನಾಳೆಯೇ ಶಾಂತಿ ನೆಲೆಸುತ್ತದೆ ಎಂದು ಮಾಧ್ಯಮಗಳ ಮೇಲೆ ಪ್ರಿಯಾಂಕ್‌ ಆರೋಪ ಮಾಡಿದರು.

ಇಬ್ಬರ ತೀರ್ಮಾನ ಅಲ್ಲ: ಕುಣಿಗಲ್‌ ಶಾಸಕರು ಸೇರಿ ಹಲವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರಲ್ವಾ ಎಂಬ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ 40 ವರ್ಷ ಪಕ್ಷಕ್ಕೆ ದುಡಿದ್ದಾರೆ. ಇಂದಲ್ಲ, ನಾಳೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಯಾರೋ ಇಬ್ಬರು ಮಾತನಾಡಿದರೆ ಅದೇ ತೀರ್ಮಾನವಲ್ಲ. ಯಾರ ಮುಂದೆ ಹೇಳಬೇಕೋ ಅವರ ಮುಂದೆ ಹೇಳಬೇಕು ಎಂದು ಪ್ರಿಯಾಂಕ್‌ ಹೇಳಿದರು.

ರಾಜಕೀಯಕ್ಕಾಗಿ ಐಟಿ-ಇ.ಡಿ ದುರ್ಬಳಕೆ: ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ನಿವಾಸ ಮೇಲೆ ಇ.ಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ ಅವರು, ಇ.ಡಿ, ಸಿಬಿಐ, ಐಟಿ ಎಲ್ಲಾ ಕೇಂದ್ರದ ಕೈಗೊಂಬೆಗಳು. ಇವುಗಳನ್ನು ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಮೇಲೆ ರಾಜಕೀಯ ಟೂಲ್‌ ಆಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.