ರಾಜ್ಯ ಕಾಂಗ್ರೆಸ್‌ ಸರ್ಕಾರದ ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ, ಜಾತಿ-ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಬೆಂಗಳೂರು (ಅ.01): ರಾಜ್ಯ ಕಾಂಗ್ರೆಸ್‌ ಸರ್ಕಾರದ ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ, ಜಾತಿ-ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ತನ್ಮೂಲಕ, ರಾಜ್ಯದ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ನೀಡುತ್ತಿರುವ ಬಿಜೆಪಿಗರು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತಾರಾ ಎಂದು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌ ಅವರು, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯಲ್ಲಿ ಅನಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತೀರಾ ವೈಯಕ್ತಿಕ ವಿಷಯ ಕೇಳಿದರೆ ಜನರು ಮಾಹಿತಿ ನೀಡದೇ ಇರಬಹುದು. ಇದು ಜನರಿಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್‌ ಹೇಳಿದೆ. ಕೇಂದ್ರ ಸರ್ಕಾರ ಸಂವಿಧಾನದ ಪ್ರಕಾರ ತನ್ನ ಅಧಿಕಾರ ಚಲಾಯಿಸಿ ಜಾತಿ ಗಣತಿ, ಜನ ಗಣತಿ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಸಮೀಕ್ಷೆಯ ಅಧಿಕಾರವೇ ಇಲ್ಲ ಎಂದರು.

ಬಿಜೆಪಿ ನಾಯಕರ ಹೇಳಿಕೆ ಅವರ ವೈಯಕ್ತಿಕ: ಕೆಲ ಬಿಜೆಪಿ ನಾಯಕರೇ ಸಮೀಕ್ಷೆ ಬಹಿಷ್ಕಾರ ಹೇಳಿಕೆ ನೀಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ. ಸಂಸದ ತೇಜಸ್ವಿಸೂರ್ಯ ಅವರ ಬಹಿಷ್ಕಾರದ ಹೇಳಿಕೆಯೂ ಅವರ ವೈಯಕ್ತಿಕ. ಸಮೀಕ್ಷೆ ಬಹಿಷ್ಕರಿಸುವ ಸಂಬಂಧ ಬಿಜೆಪಿಯಿಂದ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಯಾರೇ ಮಾತನಾಡಿದರೂ ಅದು ಅವರವರ ವೈಯಕ್ತಿಕ ಅಭಿಪ್ರಾಯ ಎಂದು ಆರ್.ಅಶೋಕ್ ಹೇಳಿದರು.

ಸಮೀಕ್ಷೆ ಮಾಡುವ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲ. ಸಮೀಕ್ಷೆ ಮಾಡದ ಸಿಬ್ಬಂದಿಯನ್ನು ಅಮಾನತು ಮಾಡುವುದಾಗಿ ಈ ಸರ್ಕಾರ ಬೆದರಿಕೆವೊಡ್ಡಿದೆ. ರಾಜ್ಯ ಸರ್ಕಾರದಿಂದ ಈ ಸಮೀಕ್ಷೆಯ ಅಗತ್ಯವೇ ಇರಲಿಲ್ಲ. ಎರಡು ಕೋಟಿ ಮನೆಗಳ ಹಣೆಬರಹವನ್ನು ಎರಡೇ ವಾರಗಳಲ್ಲಿ ಬರೆಯಲು ಮುಂದಾಗಿದ್ದಾರೆ. ಜಾತಿ ಸಮೀಕ್ಷೆಯ ಕಾಲಂಗಳಲ್ಲಿ ಕೇವಲ ಜಾತಿ/ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಸಾಮಾಜಿಕ-ಶೈಕ್ಷಣಿಕ ಅಂಶಗಳಿಲ್ಲ. ಸಮೀಕ್ಷೆ ಮುಗಿದ ನಂತರ ವರದಿಯನ್ನು ಕಸದ ಬುಟ್ಟಿಗೆ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಒಡೆಯುವ ಸರದಾರ ಸಿಎಂ ಸಿದ್ದು

ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ ಜಾತಿ-ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಆ ನಡೆಯನ್ನೇ ಇಲ್ಲಿ ತೋರಿಸಿದ್ದಾರೆ. ಜಾತಿ ಒಡೆಯುವ ಸರದಾರ ಸಿದ್ದರಾಮಯ್ಯ. ಸಂವಿಧಾನದ ಅಡಿಯಲ್ಲಿ ಯಾವುದೇ ಜಾತಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಆರ್‌.ಅಶೋಕ್‌ ಹೇಳಿದರು.