ಸಚಿವ ಸಂತೋಷ ಲಾಡ್ ಅವರು ಬಿಜೆಪಿಯನ್ನು 'ವಾಶಿಂಗ್ ಮಷಿನ್'ಗೆ ಹೋಲಿಸಿದ್ದು, ಎಷ್ಟೇ ಭ್ರಷ್ಟರಿದ್ದರೂ ಅಲ್ಲಿಗೆ ಹೋದರೆ ಶುದ್ಧರಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದು ಪಂಜಾಬ್ ಸರ್ಕಾರವನ್ನು ಬೀಳಿಸುವ ತಂತ್ರ ಎಂದು ಅವರು ಆರೋಪಿಸಿದ್ದಾರೆ.

ಧಾರವಾಡ (ಏ.28): ಬಿಜೆಪಿಯಲ್ಲಿ ಒಂದು ವಾಶಿಂಗ್‌ ಮಶಿನ್‌ ಇದ್ದು, ಯಾರು ಎಷ್ಟೇ ಭ್ರಷ್ಟರಿದ್ದರೂ ಅದರಲ್ಲಿ ಹಾಕಿದರೆ ಅವರು ಶುದ್ಧರಾಗಿ 24 ಕ್ಯಾರೆಟ್‌ ಚಿನ್ನವಾಗುತ್ತಾರೆ ಎಂದು ಸಚಿವ ಸಂತೋಷ ಲಾಡ್, ಇತ್ತೀಚೆಗೆ ಆಮ್‌ ಆದ್ಮಿ ಪಕ್ಷದ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರಿದಕ್ಕೆ ವ್ಯಂಗ್ಯವಾಡಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಾಶಿಂಗ್‌ ಪೌಡರ್‌ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ’ ಎಂದು ನಾವು ಚಿಕ್ಕವರಿದ್ದಾಗ ವಾಶಿಂಗ್‌ ಪೌಡರ್‌ ಬಗ್ಗೆ ಬರುವ ಜಾಹೀರಾತನ್ನು ತಮಾಷೆ ಮಾಡುತ್ತಿದ್ದೆವು. ಆ ರೀತಿ ಯಾರೇ ಭ್ರಷ್ಟಾಚಾರ ಮಾಡಿದರೂ ಬಿಜೆಪಿಗೆ ಬಂದ ಮೇಲೆ ಅವರು ಶುದ್ಧವಾಗುತ್ತಾರೆ. ರಾಘವ್‌ ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು? ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳಿಸಲು ಈ ತಂತ್ರಗಾರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಪಂಚ ರಾಜ್ಯಗಳ ಚುನಾವಣೆಯ ವಿಚಾರವಾಗಿ ಮಾತನಾಡಿ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಯೊಂದಿಗೆ ನಾವು ಗೆಲ್ಲುತ್ತೇವೆ. ಕೇರಳದಲ್ಲಿ ಯುಡಿಎಫ್ ಮೈತ್ರಿ ಗೆಲ್ಲುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.

ಶಾಸಕ ವಿನಯ ಕುಲಕರ್ಣಿ ಪರವಾಗಿ ನಡೆದ ಮೌನ ಮೆರವಣಿಗೆ ಸಮರ್ಥಿಸಿಕೊಂಡ ಲಾಡ್‌, ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು. ಮೌನ ಮೆರವಣಿಗೆಯಲ್ಲಿ ಯಾರೂ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರಶ್ನಿಸಿಲ್ಲ ಎನಿಸುತ್ತದೆ ಎಂದರು.