ಮೆಟ್ರೋ ಯೋಜನೆ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ. ಅದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ. ಯಾರು ಹೆಚ್ಚು ದುಡ್ಡು ಹಾಕಿರುತ್ತಾರೆ ಆ ಬಗ್ಗೆ ಹೇಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಚಿತ್ರದುರ್ಗ (ಆ.10): ಕೇಂದ್ರ ಎನ್‌ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ. ವೈಯಕ್ತಿಕವಾಗಿ ಅವರಿಗೆ ಲಾಭ ಆಗಿರಬಹುದು ಬೆಂಗಳೂರಿಗೆ ಇಂದು ನಮ್ಮ ಪ್ರಧಾನಿ ಬರುತ್ತಿದ್ದಾರೆ ಸ್ವಾಗತಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮೆಟ್ರೋ ಯೋಜನೆ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ. ಅದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ. ಯಾರು ಹೆಚ್ಚು ದುಡ್ಡು ಹಾಕಿರುತ್ತಾರೆ ಆ ಬಗ್ಗೆ ಹೇಳಬೇಕು. ರಾಜ್ಯ ಸರ್ಕಾರದ ಮೈಲೇಜ್ ಹೆಚ್ಚಿರಬೇಕು, ಕೇಂದ್ರದ್ದು ಕಡಿಮೆ. ಮೋದಿ ಅವರಿಗೆ ಮೊದಲಿಂದಲೂ ಫ್ರೀ ಮೈಲೇಜ್ ಸಿಕ್ಕಿದೆ. ಒಳಮೀಸಲಾತಿ ಜಾರಿ ಬಗ್ಗೆ ನಮ್ಮ ಸರ್ಕಾರದ ಬದ್ಧತೆ ಇದೆ. ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡಲಾಗುವುದು ಎದು ಸಂತೋಷ್ ಲಾಡ್ ತಿಳಿಸಿದರು.

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ: ಕಾರ್ಮಿಕರ ಕೆಲಸದ ಅವಧಿಯನ್ನು ದಿನದಲ್ಲಿ 9 ರಿಂದ 10 ಗಂಟೆಗಳಿಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ‘ಫ್ಲೆಕ್ಸಿ ಅವರ್‌’ ಪ್ರಸ್ತಾವನೆ ಅಳವಡಿಕೆಗೆ ರಾಜ್ಯದ ಯಾವುದೇ ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಸಮ್ಮತಿಯೊಂದಿಗೆ ಮುಂದೆ ಬಂದರೆ ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರದ ‘ಫ್ಲೆಕ್ಸಿ ಅವರ್‌’ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಕೈಗಾರಿಕೆಗಳು ಸಹಮತ ವ್ಯಕ್ತಪಡಿಸುತ್ತಿವೆ.

ಹಾಗಾಗಿ ಸರ್ಕಾರದ ಸದ್ಯದ ನಿಲುವೇನೆಂದರೆ ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಹಾಗಂತ ಕಣ್ಣು ಮುಚ್ಚಿಕೊಂಡು ಎಲ್ಲಾ ಕೈಗಾರಿಕೆಗಳಲ್ಲೂ ಇದನ್ನು ಜಾರಿಗೊಳಿಸುವುದೂ ಇಲ್ಲ ಎಂದರು. ಬದಲಿಗೆ ಇದನ್ನು ಯಾವ ಕೈಗಾರಿಕೆಗಳಿಗೆ ಜಾರಿಗೊಳಿಸಬಹುದು, ಅದಕ್ಕೆ ಇರುವ ಷರತ್ತುಗಳೇನು ಎಂಬುದು ಪ್ರಸ್ತಾವನೆಯಲ್ಲೇ ಇದೆ. ಅದರಂತೆ ಈ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳುವ ಅಥವಾ ಬಿಡುವ ನಿರ್ಧಾರವನ್ನು ಆಯಾ ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳಿಗೆ ಬಿಡುತ್ತೇವೆ ಎಂದು ಹೇಳಿದರು.

ಕಾರ್ಮಿಕ ಸಂಘಟನೆ ಒಪ್ಪಿಗೆ ಕಡ್ಡಾಯ: ಪ್ರಸ್ತಾವನೆಯಲ್ಲೇ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಒಪ್ಪಿಗೆ ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದೆ. ಹಾಗಾಗಿ ಯಾವುದೇ ಕಾರ್ಖಾನೆ, ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರ ಸಂಘಟನೆ ಮತ್ತು ಕಾರ್ಮಿಕರು ಒಪ್ಪಿಗೆ ಪಡೆದು ಲಿಖಿತವಾಗಿ ತಮಲ್ಲಿ ಫ್ಲೆಕ್ಸಿ ಅವರ್‌ ಕೆಲಸದ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಮ್ಮ ಇಲಾಖಾ ಅಧಿಕಾರಿಗಳು ಮಾರ್ಗಸೂಚಿ ಪರಿಶೀಲಿಸಿ, ಸಂಬಂಧಿಸಿದ ಎಲ್ಲರೊಂದಿಗೆ ಸಭೆ ನಡೆಸಲಿದ್ದಾರೆ. ಎಲ್ಲರ ಅಭಿಪ್ರಾಯ ಒಂದೇ ಆಗಿದ್ದರೆ ಒಪ್ಪಿಗೆ ನೀಡಲಿದ್ದಾರೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದ ಸಾ ಇಂಡಸ್ಟ್ರೀಸ್‌ ಸೇರಿ ಕೆಲ ಕೈಗಾರಿಕೆಗಳಿಗೆ ಈಗಾಗಲೇ ಅನುಮತಿ ನೀಡಿದ್ದೇವೆ ಎಂದರು.