ರಾಜಕೀಯ ಚಟ, ಭಾಷಣದ ಚಟಕ್ಕೆ ಮೀಸಲಾತಿ ಘೋಷಣೆ ಮಾಡಬಾರದು. ಸತೀಶಣ್ಣ (ಸಚಿವ ಜಾರಕಿಹೊಳಿ) ದಯವಿಟ್ಟು ಮೀಸಲಾತಿ ಭೂತ ಸರಿಪಡಿಸುವ ಕೆಲಸ ಮಾಡ್ರಿ ಎಂದು ರಾಜೂಗೌಡ ನಾಯಕ ಅಸಮಾಧಾನ ಹೊರಹಾಕಿದರು.

ಬಾಗಲಕೋಟೆ (ಅ.19): ರಾಜಕೀಯ ಚಟ, ಭಾಷಣದ ಚಟಕ್ಕೆ ಮೀಸಲಾತಿ ಘೋಷಣೆ ಮಾಡಬಾರದು. ಸತೀಶಣ್ಣ (ಜಾರಕಿಹೊಳಿ) ದಯವಿಟ್ಟು ಮೀಸಲಾತಿ ಭೂತ ಸರಿಪಡಿಸುವ ಕೆಲಸ ಮಾಡ್ರಿ ಎಂದು ಬಿಜೆಪಿ ಮಾಜಿ ಸಚಿವ ರಾಜೂಗೌಡ ನಾಯಕ ಸ್ವಪಕ್ಷದ ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದರು. ಜಿಲ್ಲೆಯ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಅವರಿಗೆ ಮೀಸಲಾತಿ ಕೊಡಬೇಡಿ, ಇವರಿಗೆ ಮೀಸಲಾತಿ ಕೊಡಬೇಡಿ ಎಂದು ಸಮಾಜದ ಗುರುಗಳು, ಸ್ವಾಮೀಜಿಗಳು ಹೇಳಬಹುದು. ನಾವು ರಾಜಕಾರಣಿಗಳು ಹಾಗೆ ಹೇಳಲು ಆಗಲ್ಲ. ಯಾರಿಗೆ ಅರ್ಹತೆ ಇದೆ ಅವರಿಗೆ ಕೊಡಬೇಡಿ ಎಂದು ಹೇಳುವ ಹಕ್ಕು ನಮಗೆ ಇಲ್ಲ ಎಂದರು.

ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ನೌಕರಿ ಸಿಗಲಿ ಎಂದು ಮೀಸಲಾತಿ ಕೊಡುತ್ತೇವೆ. ಆದರೆ ಈ ದಿನಗಳಲ್ಲಿ ಏನಾಗ್ತಿದೆ. ಹೋದ ಬಾರಿ (ಬಿಜೆಪಿ ಸರ್ಕಾರದಲ್ಲಿ) ನಾವೊಂದು ತಪ್ಪು ಮಾಡಿದೆವು. ನಾನು ಹಲವು ಬಾರಿ ಮನವಿ ಮಾಡಿದೆ. ಆದರೆ ಆಗ ಕೆಲವು ಜನ ನನ್ನನ್ನು ವಿಲನ್ ಮಾಡಿದರು. ತಳವಾರ ಸಮಾಜಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಟ್ಟಿದ್ದೇವೆ ಎಂದು ಜಗಳ ಹಚ್ಚಿದೆವು. ತಳವಾರ ಅದು ಜಾತಿ ಅಲ್ಲ, ಅದೊಂದು ಉದ್ಯೋಗ, ತಳವಾರ ಮಾಲಿಗೌಡ, ವಾಲಿಕಾರ, ಕುಲಕರ್ಣಿ ಇವೆಲ್ಲ ಉದ್ಯೋಗ. ಕಬ್ಬಲಿಗ, ಗಂಗಾಮತಸ್ಥ ಸಮಾಜದವರು ಮೀಸಲಾತಿಯನ್ನು ತಳವಾರರಿಗೆ ಕೊಡಿ ಎಂದು ಕೇಳಿಲ್ಲ. ಸಂಪೂರ್ಣ ಗಂಗಾಮತಸ್ಥ, ಕಬ್ಬಲಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಿ ಎಂದು ಕೇಳಿದ್ದರು. ಆದರೆ ನಾವು ತಳವಾರರಿಗೆ ಕೊಟ್ಟಿದ್ದೇವೆ ಎಂದು ಹೇಳಿದೆವು. ಇದರಲ್ಲಿ ದೊರೆಗಳಿಗೆ (ವಾಲ್ಮೀಕಿ) ಹಾಗೂ ಕಬ್ಬಲಿಗ ಸಮಾಜದ ತಳವಾರರಿಗೆ ಜಗಳ ಹಚ್ಚಿ ಬಿಟ್ಟೆವು ಎಂದು ಕಲಬುರ್ಗಿ ಸಮಾವೇಶದಲ್ಲಿ ಘೋಷಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಮೀಸಲಾತಿ ಶೇ.14ಕ್ಕೆ ಹೆಚ್ಚಿಸಿ: ಈಗ ಏನಾಗಿದೆ ಕುರುಬ ಸಮಾಜಕ್ಕೆ ಎಸ್ಟಿ. ಗೊಲ್ಲ ಸಮಾಜಕ್ಕೆ ಎಸ್ಟಿ, ಬೆಸ್ತ ಸಮಾಜಕ್ಕೆ ಎಸ್ಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಈಚೆಗೆ ಸಿಎಂ ಸಿದ್ದರಾಮಯ್ಯನವರು, ನಿಮ್ಮದು ಕಿತ್ತುಕೊಳ್ಳಲ್ಲ. ಅದು ನಾನು ಕೊಟ್ಟಿಲ್ಲ, ಬೊಮ್ಮಾಯಿ ಕೊಟ್ಟಿದ್ದರು ಎಂದು ಹೇಳಿದರು. ಬೊಮ್ಮಾಯಿ ಅಣ್ಣ ಒಂದು ವೇದಿಕೆ ಮೇಲೆ ಹೇಳಿದ ನಾನು ಕೊಟ್ಟಿಲ್ಲ ಮೊದಲಿನವರು ಕೊಟ್ಟಿದ್ದಾರೆ ಎಂದು. ಯಾರಾದ್ರೂ ಕೊಡ್ರೆಪ್ಪ ನಿಮಗೆ ಬೇಡ ಅನ್ನಲ್ಲ. ಕುರುಬ ಸಮಾಜಕ್ಕೆ ಶೇ. 7 ಇಲ್ಲ 8 ಸೇರಿಸಿ ಶೇ.14 ಮಾಡಿ ಕೊಡಿ ಬೇಡ ಅನ್ನಲ್ಲ. ಗೊಲ್ಲರ ಸಮಾಜ ಶೇ.4 ಇದ್ದರೆ, ಶೇ.14ಕ್ಕ ಕ್ಕೆ4 ಸೇರಿಸಿ ಮೀಸಲಾತಿ ಕೊಡಿ ಬೇಡ ಅನ್ನಲ್ಲ ಎಂದು ರಾಜೂಗೌಡ ಸಲಹೆ ನೀಡಿದರು.

ಸಮಾಜಕ್ಕೆ ನ್ಯಾಯ ಸಿಗಬೇಕು

ನಮ್ಮ ರಾಜಕೀಯ ಚಟಕ್ಕೆ, ನಮ್ಮ ಭಾಷಣ ಚಟಕ್ಕೆ ಎಲ್ಲೋ ಮೈಕ್‌ನಲ್ಲಿ ಕೊಡುತ್ತೇವೆ ಎಂದು ಹೇಳಿದ್ದರಿಂದ ಇಷ್ಟು ದಿನ ನಮ್ಮವರು ಕಬ್ಬಲಿಗ ಸಮಾಜದ ಜೊತೆ ಹೊಡೆದಾಡುತ್ತಿದ್ದರು. ಈಗ ಕುರುಬ ಸಮಾಜದ ಜೊತೆ ಹೊಡೆದಾಡುತ್ತಿದ್ದಾರೆ. ಯಾವಾಗ ನಮ್ಮ ಸಮಾಜಕ್ಕೆ ನಾವು ನ್ಯಾಯ ಕೊಡುವ ಕೆಲಸ ಮಾಡೋದು? ಎಷ್ಟು ದಿನ ಹೀಗೆ ಹೊಡೆದಾಡೋಕೆ ಹಚ್ಚುವ ಕೆಲಸ ಮಾಡೋದು. ಸತೀಶಣ್ಣ ನಿನಗೆ ಮನವಿ ಮಾಡುತ್ತೇನೆ. ನಿನ್ನ ರಾಜ್ಯದ ಮುಖ್ಯಮಂತ್ರಿಯಾಗಿ ನೋಡಬೇಕು ಅನ್ನೋ ಆಸೆ ನಮಗೆ ಇದೆ.ನೀನು ಮಾತಾಡಲ್ಲ, ಆದ್ರೆ ಅದನ್ನ ಮಾಡಿ ತೋರಿಸುವ ಕೆಲಸ ಮಾಡ್ತಿಯಾ. ನಿನ್ನಿಂದ ಇಡೀ ಸಮಾಜಕ್ಕೆ ಒಳ್ಳೆಯದು ಆಗಬೇಕು. ದಯವಿಟ್ಟು ರಿಸರ್ವೇಷನ್ ಭೂತ ಸರಿಪಡಿಸುವ ಕೆಲಸ ಮಾಡಬೇಕು. ನೀನು ಹೇಳಿದ್ದನ್ನು ನಮ್ಮ ಸಮಾಜ ಕೇಳುತ್ತೆ. ನಮ್ಮವರು 15 ಜನ ಶಾಸಕರು ನಿಮ್ಮ ಪಕ್ಷದಿಂದ ಗೆದ್ದಿದ್ದಾರೆ. ನಿನ್ನ ಮೂಲಕ ಗೆದ್ದಿದ್ದಾರೆ, ಎಲ್ಲರೂ ನೀನು ಹೇಳಿದಂತೆ ಕೇಳ್ತಾರೆ. ಮುಖ್ಯಮಂತ್ರಿಗಳು ನೀನು ಹೇಳಿದರೆ ಇಲ್ಲ ಅನ್ನಲ್ಲ, ದಯವಿಟ್ಟು ಸಮಸ್ಯೆ ಸರಿಪಡಿಸುವ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡರು.