ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಉನ್ನತ ಹುದ್ದೆಗಳು ಬೇಗ ಒಲಿಯಲಿಲ್ಲ. ಅವರು ಸಚಿವರಾಗಲು, ಹಿಂದುಳಿದ ವರ್ಗಗಳು, ಅಹಿಂದ ನಾಯಕ, ಕುರುಬ ಸಮಾಜದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಕಾಯಬೇಕಾಯಿತು.

ದಾವಣಗೆರೆ (ಡಿ.15): ಹಾಲುಮತ (ಕುರುಬ) ಸಮಾಜ, ಮುಸ್ಲಿಂ ಧರ್ಮೀಯರ ಕೈಯ್ಯಿಂದ ಯಾವುದೇ ಕೆಲಸ, ಕಾರ್ಯ ಆರಂಭ ಮಾಡಿಸಿದರೆ ಯಶಸ್ಸು ಸಿಗುತ್ತದೆಂಬ, ಬೋಣಿಗೆ ಮಾಡಿಸಿದರೆ ಲಾಭವಾಗುತ್ತದೆ, ಒಳ್ಳೆಯದಾಗುತ್ತದೆ ಎಂಬ ಬಲವಾದ ನಂಬಿಕೆ ಡಾ.ಶಾಮನೂರು ಶಿವಶಂಕರಪ್ಪ ಅವರ ಮನಸ್ಸಿನಲ್ಲಿ ಹಿಂದಿನಿಂದಲೂ ಬಲವಾಗಿ ಬೇರೂರಿತ್ತು. ಇಂತಹ ನಂಬಿಕೆಗೆ ಇಂಬು ಕೊಡುವಂತೆ ರಾಜ್ಯ ರಾಜಕಾರಣದಲ್ಲಿ ನಾಡಿನ ಪ್ರಬಲ ಕೋಮಿನ ಪ್ರಮುಖ ನಾಯಕನಾಗಿದ್ದರೂ, ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಉನ್ನತ ಹುದ್ದೆಗಳು ಬೇಗ ಒಲಿಯಲಿಲ್ಲ. ಅವರು ಸಚಿವರಾಗಲು, ಹಿಂದುಳಿದ ವರ್ಗಗಳು, ಅಹಿಂದ ನಾಯಕ, ಕುರುಬ ಸಮಾಜದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಕಾಯಬೇಕಾಯಿತು.

ಕಡೆಗೂ ತಾವು ಮಂತ್ರಿಯಾದ ಖುಷಿ, ಇಳಿವಯಸ್ಸಿನಲ್ಲೂ ಶಾಮನೂರರ ಮುಖದಲ್ಲಿ ಕಾಣುತ್ತಿತ್ತು. ಕಡೆಗೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವಷ್ಟರ ಮಟ್ಟಿಗೆ ಆತ್ಮವಿಶ್ವಾಸ ಗಣಿಯಾಗಿದ್ದ ಹಿರಿಯ ಜೀವ ಅವರಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದವರು ಡಾ.ಶಾಮನೂರು ಶಿವಶಂಕರಪ್ಪ ಅವರಿಂದ ಪಕ್ಷಾತೀತವಾಗಿ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಂದಲ್ಲ ಒಂದು ರೀತಿ ನೆರವು, ಸಹಾಯ, ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಈ ಕಾರಣಕ್ಕಾಗಿಯೇ ಶಾಮನೂರು ಶಿವಶಂಕರಪ್ಪ ರಾಜ್ಯ ರಾಜಕೀಯದಲ್ಲಿ ಅಜಾತಶತೃ ಎಂಬ ಹೆಸರನ್ನು ಕೊನೆವರೆಗೂ ಉಳಿಸಿಕೊಂಡಿದ್ದವರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜೆಡಿಯು, ಭಾರತ ಕಮ್ಯುನಿಷ್ಟ್ ಪಕ್ಷ ಹೀಗೆ ಯಾವುದೇ ಹಳೆ-ಹೊಸ ಪಕ್ಷವಾಗಿದ್ದರೂ ಶಾಮನೂರು ಶಿವಶಂಕರಪ್ಪ ಬಗ್ಗೆ ಅಪಾರ ಗೌರವ ಹೊಂದಿವೆ.

ಸಾಮಾನ್ಯವಾಗಿ ಶಿವಶಂಕರಪ್ಪ ಅವರು ಯಾವುದೇ ಹೊಸ ಉದ್ಯಮ, ಸಂಸ್ಥೆ ಆರಂಭಿಸುವ ವೇಳೆ, ವಾಹನ, ಹೆಲಿಕಾಫ್ಚರ್ ಸೇರಿದಂತೆ ಏನನ್ನಾದರೂ ಹೊಸದಾಗಿ ಖರೀದಿಸಿದರೆ, ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಮುಸ್ಲಿಂ, ಕುರುಬ ಸಮಾಜದವರು ಮೊದಲು ಹತ್ತಬೇಕು. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರಕ್ಕೆ ಸೂಚಕರು, ಅನುಮೋದಕರೂ ಕುರುಬರು- ಮುಸ್ಲಿಮರೇ ಆಗಿರಬೇಕೆಂಬ ಅಲಿಖಿತ ನಿಯಮ ಪಾಲಿಸಿಕೊಂಡು ಬಂದಿದ್ದರು. ಅವರ ಮಕ್ಕಳಿಗೂ ಅದನ್ನೇ ಕಲಿಸಿದ್ದಾರೆ. ಯಾವುದೇ ವ್ಯವಹಾರ ಹೊಸದಾಗಿ ಆರಂಭಿಸಿದರೆ ಬೋಣಿಗೆ ಮಾಡುವುದು ಮುಸ್ಲಿಂ ಮತ್ತು ಹಾಲುಮತಸ್ಥರೆಂಬುದೇ ಗಮನಾರ್ಹ.

ಕೆಲ ವರ್ಷಗಳ ಹಿಂದೆ ಚಾಪ್ಟರ್ ವಿಮಾನ, ಹೆಲಿಕಾಫ್ಟರ್ ಖರೀದಿಸಿದಾಗಲೂ ಮೊದಲು ಹತ್ತಿಸಿದ್ದು ಮುಸ್ಲಿಂ ಮುಖಂಡರನ್ನು. ಹೀಗೆ ತಮ್ಮದೇ ನಂಬಿಕೆ, ಆಚಾರ, ವಿಚಾರ ಅನುಸರಿಸಿಕೊಂಡು ಬಂದ ಶಾಮನೂರು ಶಿವಶಂಕರಪ್ಪ ಎಲ್ಲ ಧರ್ಮೀಯರ ದೇವರಿಗೂ ನಡೆದುಕೊಳ್ಳುವ ಮೂಲಕ ಸರ್ವಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದರು. ಮಠಾಧೀಶರೆಂದರೇ ಅಷ್ಟೇ ಗೌರವ. ಹೀಗೆ ನಂಬಿಕೆ ಇಟ್ಟುಕೊಂಡು ಬಂದ ಶಾಮನೂರು ಶಿವವಶಂಕರಪ್ಪ ಐದಾರು ದಶಕಗಳ ಕಾಲ ಕಾಂಗ್ರೆಸ್ಸಿನ ನಿಷ್ಟಾವಂತ ಕಾರ್ಯಕರ್ತ, ಮುಖಂಡ, ಪ್ರಭಾವಿ ನಾಯಕನಾಗಿ, ಕೆಪಿಸಿಸಿ ಕಾಯಂ ಖಜಾಂಚಿ ಎಂಬ ಪಟ್ಟವನ್ನೇ ಅಲಂಕರಿಸಿದ್ದರು. ಪ್ರಬಲ ಜನಾಂಗದ ಮುಂಚೂಣಿ ನಾಯಕನಾಗಿ ಇವರು ಬೆಳೆದರೂ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವವರೆಗೂ ಸಚಿವನಾಗಲು ಹಿರಿಯ ಜೀವ ಕಾಯಬೇಕಾದ ಪರಿಸ್ಥಿತಿ ಬಂದಿದ್ದು ಮಾತ್ರ ವಿಪರ್ಯಾಸವೇ ಸರಿ.

ಪ್ರಬಲ ವೀರಶೈವ ಲಿಂಗಾಯತ ನಾಯಕ ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಕ್ಕಾಗಿ ಹಠ ಹಿಡಿದಿದ್ದರೆ ಎಂದೋ ಮುಖ್ಯಮಂತ್ರಿಯೂ ಆಗಬಹುದಿತ್ತು. ಆದರೆ, ಕೇಳಿ ಪಡೆಯುವ ಜಾಯಮಾನ ಹೊಂದಿರದ ಅಪರೂಪದ ಜನನಾಯಕ ಅವರಾಗಿದ್ದರು. ‘ಬಂದದ್ದೆಲ್ಲಾ ಬರಲಿ, ಬಕ್ಕಪ್ಪನ ದಯೆ ಇರಲಿ’ ಎಂಬ ದಾವಣಗೆರೆ ಹಳೆಯ ಭಾಗದಲ್ಲಿ ಪ್ರಚಲಿತದಲ್ಲಿರುವ ಮಾತಿನಂತೆ ನಡೆದುಕೊಂಡು ಬಂದವರು. ಇಳಿ ವಯಸ್ಸಿನಲ್ಲೂ ಸಿದ್ದರಾಮಯ್ಯ ಸಂಪುಟದ ಅತ್ಯಂತ ಹಿರಿಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಾ.ಶಾಮನೂರು ತಾವು ನಡೆದು ಬಂದ ಹಾದಿಯನ್ನು ಎಂದಿಗೂ ಮರೆತವರಲ್ಲ.

ಸಾಮಾನ್ಯ ವರ್ತಕನಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಕಂಡಂತಹ ಜೀವಂತ ದಂತಕಥೆಯಾದವರು. ಸಾಮಾನ್ಯ ವರ್ತಕ ಆಗಿದ್ದುಕೊಂಡೇ 70ರ ದಶಕದಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಕಾಂಗ್ರೆಸ್ ಪಕ್ಷದಿಂದ ನಗರಸಭೆ ಸದಸ್ಯನಾಗಿ, ಅಧ್ಯಕ್ಷನಾಗಿ ಆರಂಭಿಸಿದ ರಾಜಕೀಯ ಸೇವೆ ಡಿ.14ರಂದು ಸಂಜೆವರೆಗೂ ಯಶಸ್ವಿಯಾಗಿ ನಡೆದು ಬಂದಿದೆ. ಸದಾ ಶ್ವೇತವಸ್ತ್ರಧಾರಿಯಾಗಿ ಕಂಗೊಳಿಸುತ್ತಿದ್ದ ಶಾಮನೂರು ಶಿವಶಂಕರಪ್ಪ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲದಂತೆ, ಪರಿಶುದ್ಧ ರಾಜಕಾರಣದಿಂದ ಮನೆ ಮಾತಾದವರು.

ಅನಾರೋಗ್ಯವೆಂದು ವಿಶ್ರಮಿಸಿದವರಲ್ಲ

ಸ್ವಚ್ಛ, ನೇರ ನಡೆ, ನುಡಿ, ಆಡಳಿತ ನೀಡುತ್ತ ಜನಾನುರಾಗಿ ನಾಯಕರಾಗಿ ಬೆಳೆದು ಬಂದ ಶಾಮನೂರು ಶಿವಶಂಕರಪ್ಪ ತಮ್ಮ 94ನೇ ವಯಸ್ಸಿನವರೆಗೂ ಯುವಕರೂ ನಾಚುವಂತೆ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಶ್ವಾಸಕೋಶ ಸಂಬಂಧಿ, ವಯೋಸಹಜ ಕಾರಣಕ್ಕೆ ಬಳಲಿದ್ದನ್ನು ಬಿಟ್ಟರೆ ತಮ್ಮ ಜೀವಿತಾವದಿಯಲ್ಲಿ ಎಂದಿಗೂ ಅನಾರೋಗ್ಯವೆಂದು ವಿಶ್ರಮಿಸಿದವರಲ್ಲ. ಮಕ್ಕಳು, ಬಡವರು, ದೀನ-ದಲಿತರು, ಅಸಹಾಯಕರು, ವಯೋವೃದ್ಧರು, ರೈತರು ಹೀಗೆ ಎಲ್ಲರಿಗೂ ಸ್ಪಂದಿಸುತ್ತಾ ಬಂದ ಶಾಮನೂರು ಶಿವಶಂಕರಪ್ಪ ದಾವಣಗೆರೆ ಹೆಸರಿಗೆ ಕೀರ್ತಿ ತಂದ ಶತಮಾನ ಶ್ರೇಷ್ಠರಲ್ಲಿ ಒಬ್ಬರಾಗಿ ಕಂಗೊಳಿಸುತ್ತಾರೆ. ಅಂತಹದ್ದೊಂದು ದಾವಣಗೆರೆ ನಕ್ಷತ್ರ ಇಂದು ಇಲ್ಲವಾಗಿದೆ.