ಹಿಂದುಳಿದ ವರ್ಗಗಳ ಸಂಘಟನೆ ಇಂದು ಮತ್ತಷ್ಟು ಬಲಿಷ್ಟಗೊಳ್ಳಬೇಕಾಗಿದೆ. ಒಬಿಸಿಯಿಂದಲೇ ಹೆಚ್ಚು ಶಕ್ತಿಯನ್ನು ಪಕ್ಷಕ್ಕೆ ತುಂಬಬೇಕಾಗಿದೆ. ಹಿಂದುಳಿದ ವರ್ಗವು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಶಕ್ತಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ನ.30): ಹಿಂದುಳಿದ ವರ್ಗವು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಶಕ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಆಯೋಜಿಸಿದ್ದ ನೂತನ ಬ್ಲಾಕ್ ಅಧ್ಯಕ್ಷರಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಆದೇಶದ ಪತ್ರ ನೀಡಿ ಅವರು ಮಾತನಾಡಿ, ಹಿಂದುಳಿದ ವರ್ಗಗಳ ಸಂಘಟನೆ ಇಂದು ಮತ್ತಷ್ಟು ಬಲಿಷ್ಟಗೊಳ್ಳಬೇಕಾಗಿದೆ. ಒಬಿಸಿಯಿಂದಲೇ ಹೆಚ್ಚು ಶಕ್ತಿಯನ್ನು ಪಕ್ಷಕ್ಕೆ ತುಂಬಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ವಿವಿಧ ಘಟಕಗಳಿಗೆ ನೇಮಕ ಮಾಡಲಾಗಿದೆ.
ಇಂದು ಆದೇಶ ಪತ್ರವನ್ನು ಕೂಡ ನೀಡಲಾಗಿದೆ. ಎಲ್ಲಾ ನೇಮಕಗೊಂಡವರು ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಸಂಘಟನೆ ಬಹಳ ಮುಖ್ಯ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ನೆರವಾಗಿ ಎಂದು ಕರೆ ನೀಡಿದರು. ನಮ್ಮ ಮುಂದೆ ಬಹುದೊಡ್ಡ ಸವಾಲುಗಳಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ. ಸಂಘಟನೆಯ ಮೂಲಕ ಈಗಿನಿಂದಲೇ ನಾವು ಗಟ್ಟಿಗೊಳ್ಳಬೇಕಾಗಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಶ್ರಮಿಸಬೇಕು. ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡಬೇಕು ಎಲ್ಲರೂ ಒಟ್ಟಾಗೋಣ. ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರತಿಯೊಬ್ಬರೂ ಪಣತೊಡಬೇಕು
ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಇದೊಂದು ಅಪೂರ್ವ ಕ್ಷಣವಾಗಿದೆ. ತಮ್ಮ ಜವಾಬ್ದಾರಿಗಳನ್ನು ಹಿಂದುಳಿದ ವರ್ಗಗಳು ನೆನಪಿಸಿಕೊಳ್ಳುವ ಕ್ಷಣವಾಗಿದೆ. ನೇಮಕ ಆದೇಶಗಳು ಕೇವಲ ವಿಜಿಟಿಂಗ್ ಪತ್ರವಾಗಬಾರದು, ಪಕ್ಷವನ್ನು ಮತ್ತಷ್ಟು ಸಂಘಟಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಘಟಕದಿಂದ ಉತ್ತಮ ಕೆಲಸಗಳನ್ನು ಮಾಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಮಾತನಾಡಿ, ಅಧಿಕಾರ, ನೇಮಕಾತಿ ನೀಡುವುದು ಎಂದರೆ ಜವಾಬ್ದಾರಿಗಳನ್ನು ಹೆಚ್ಚಿಸಿದಂತೆ ಆಗುತ್ತದೆ.
ವಿವಿಧ ಘಟಕಗಳಿಗೆ ನೇಮಕಗೊಂಡವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಜಾತ್ಯಾತೀತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಸನ್ನಕುಮಾರ್ ವಹಿಸಿದ್ದರು. ಕಾರ್ಯಕಮದಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಪುಷ್ಪಾಶಿವಕುಮಾರ್, ಪಾಲಾಕ್ಷಿ, ಎಸ್.ಟಿ.ಹಾಲಪ್ಪ, ಯು ಶಿವಾನಂದ್, ಎಸ್.ಪಿ.ಶೇಷಾದ್ರಿ, ಶಿವಣ್ಣ, ಅರ್ಚನಾ ನಿರಂಜನ್, ಇಕ್ಕೇರಿ ರಮೇಶ್, ಚಿನ್ನಪ್ಪ ಸೇರಿದಂತೆ ಹಲವರಿದ್ದರು.


