ನಮಸ್ತೆ ಸದಾ ವತ್ಸಲೇ ಅಂದರೆ ತಪ್ಪು, ಆದರೆ ಪಾಕಿಸ್ತಾನ ಜಿಂದಾಬಾದ್ ಅಂದರೆ ಸರಿಯೇ? ಕಾಂಗ್ರೆಸ್‌ಗೆ ತಾಕತ್ತು ಇದ್ದರೆ ಮುಸ್ಲಿಮರ ಮದರಸಾಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ನವದೆಹಲಿ (ಅ.15): ನಮಸ್ತೆ ಸದಾ ವತ್ಸಲೇ ಅಂದರೆ ತಪ್ಪು, ಆದರೆ ಪಾಕಿಸ್ತಾನ ಜಿಂದಾಬಾದ್ ಅಂದರೆ ಸರಿಯೇ? ಕಾಂಗ್ರೆಸ್‌ ಸರ್ಕಾರಕ್ಕೆ ತಾಕತ್ತು ಇದ್ದರೆ ಮುಸ್ಲಿಮರ ಮದರಸಾಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವುದಕ್ಕೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ಪ್ರಿಯಾಂಕ್ ಖರ್ಗೆ ಅಸ್ಥಿತ್ವ ಏನು? ತಂದೆ ನೆರಳಿನಲ್ಲಿ ಬಂದ ನೀವು (ಪ್ರಿಯಾಂಕ್‌) ಸಂಘದ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದಾರಾ? ಖರ್ಗೆ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದರು.

ನೂರು ವರ್ಷಗಳ ಹಿಂದೆ ಆರಂಭವಾದ ಆರ್‌ಎಸ್‌ಎಸ್‌ ದೇಶಭಕ್ತಿ ಬೆಳೆಸುವ ಕೆಲಸ ಮಾಡುತ್ತಿದ್ದು, ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಯಂ ಸೇವಕರು ಬಿಳಿ ಬಟ್ಟೆಯಲ್ಲಿರುವ ಸನ್ಯಾಸಗಳಂತೆ ಆರ್‌ಎಸ್‌ಎಸ್ ಹೇಳಿದ ದೇಶ ಸೇವೆ ಮಾಡುತ್ತಿದ್ದಾರೆ. ಇಂಥ ದೇಶಭಕ್ತ ಸಂಘವನ್ನು ದಮನ ಮಾಡಲು ಕಾಂಗ್ರೆಸ್ ಪದೇ ಪದೇ ಯತ್ನಿಸಿದ್ದು, ಅದು ಫಲಿಸಲಿಲ್ಲ. ಆರ್‌ಎಸ್‌ಎಸ್‌ ಬ್ಯಾನ್ ಮಾಡಲು ಹೋದವರು ನಾಶವಾಗಿದ್ದು, ಸೋತು ಸುಣ್ಣವಾಗಿದ್ದಾರೆ ಎಂದರು.

ನಿಮ್ಮ ಮಾನಸಿಕತೆ ಏನು

ಪ್ರಿಯಾಂಕ್ ಖರ್ಗೆ ಕೂಡ ಕಾಂಗ್ರೆಸ್ ಮಾನಸಿಕತೆಯಲ್ಲಿ ಬಂದಿದ್ದು, ಆರ್‌ಎಸ್‌ಎಸ್ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಭಾರತದಲ್ಲಿ ಭಾರತ್ ಮಾತೆ ಜೈ ಅನ್ನೋದು ತಪ್ಪು ಎಂದರೆ ನಿಮ್ಮ ಮಾನಸಿಕತೆ ಏನು? ಮಲ್ಲಿಕಾರ್ಜುನ ಖರ್ಗೆ ಅವರ ನೆರಳಿನಲ್ಲಿ ಬಂದ ನೀವು ಸಂಘದ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದಾರಾ? ನಿಮಗೆ ತಾಕತ್ತು, ಶಕ್ತಿ ಇದಿಯಾ? ಇದ್ದರೆ ಮದರಸಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ತಡಿಯಿರಿ ಎಂದು ಸವಾಲು ಹಾಕಿದರು.