ಖಾಸಗಿ ಸಂಘ-ಸಂಸ್ಥೆಗಳು ಅನುಮತಿಯಿಲ್ಲದೆ ಚಟುವಟಿಕೆಗಳನ್ನು ನಡೆಸುವುದನ್ನು ನಿರ್ಬಂಧಿಸಿರುವ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು.
ಬೆಂಗಳೂರು: ‘ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅನುಮತಿಯಿಲ್ಲದೆ ಚಟುವಟಿಕೆಗಳನ್ನು ನಡೆಸುವುದನ್ನು ನಿರ್ಬಂಧಿಸಿರುವ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಧಾರವಾಡ ಪೀಠದ ತಡೆಯಾಜ್ಞೆ ಪ್ರಶ್ನಿಸಿ ಹಾಗೂ ಅದನ್ನು ತೆರವುಗೊಳಿಸಲು ಕೋರಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.
ಹಿನ್ನಡೆಯಲ್ಲ: ಈ ನಡುವೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಹೈಕೋರ್ಟ್ ತಡೆಯಾಜ್ಞೆ ಸರ್ಕಾರಕ್ಕೆ ಹಿನ್ನಡೆ ಅಲ್ಲ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅನುಮತಿ ಇಲ್ಲದೆ ಚಟುವಟಿಕೆ ನಡೆಸದಂತೆ ಸರ್ಕಾರ ಮಾಡಿರುವ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ನ್ಯಾ। ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅವರು ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ಈ ತಡೆಯಾಜ್ಞೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ದೇಶನ ನೀಡಿದ್ದು, ಮೇಲ್ಮನವಿ ಸಲ್ಲಿಸುತ್ತೇವೆ’ ಎಂದರು.
ದ್ವಿಭಾಷಾ ನೀತಿ ಜಾರಿಗೆ ಚರ್ಚಿಸಿ ನಿರ್ಣಯ
ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವ ಕುರಿತು ಸಚಿವ ಸಂಪುಟ ಮತ್ತು ಶಾಸನ ಸಭೆಯಲ್ಲಿ ಚರ್ಚಿಸಿ ಸಂವಿಧಾನಾತ್ಮಕವಾದ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬನವಾಸಿ ಬಳಗದ ನೇತೃತ್ವದಲ್ಲಿ ಹಿರಿಯ ಸಾಹಿತಿಗಳು, ವಿದ್ವಾಂಸರು, ಕನ್ನಡಪರ ಹೋರಾಟಗಾರರು ಸಲ್ಲಿಸಿದ ‘ದ್ವಿಭಾಷಾ ನೀತಿ ಅನುಷ್ಠಾನ’ಕ್ಕೆ ಸಂಬಂಧಿಸಿದ ನಿರ್ಣಯಗಳ ಪಟ್ಟಿ ಸ್ವೀಕರಿಸಿ ಈ ಭರವಸೆ ನೀಡಿದ್ದಾರೆ.
ನಿಯೋಗವು ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಮೊದಲ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ತ್ರಿಭಾಷಾ ನೀತಿ ಕೈಬಿಟ್ಟು, ಎರಡು ನುಡಿ ಕಲಿಕೆಯ ದ್ವಿಭಾಷಾ ನೀತಿ ಅಳವಡಿಸಿಕೊಳ್ಳಬೇಕು. ಈ ನೀತಿಯು 2026-2027ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು. ಕನ್ನಡ ಕಲಿಗೆಗೆ ಸಂಬಂಧಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇಡಲು ಸರ್ಕಾರದ ಪರ ಸಮಿತಿಯೊಂದನ್ನು ನೇಮಿಸಬೇಕು. ಸರ್ಕಾರದ ನಿಯಮ ಉಲ್ಲಂಘಿಸುವ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.
ಬನವಾಸಿ ಬಳಗದ ನೇತೃತ್ವದ ನಿಯೋಗದಲ್ಲಿ ಹಿರಿಯ ವಿದ್ವಂಸರಾದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಹಿ.ಚಿ. ಬೋರಲಿಂಗಯ್ಯ, ಕರಿಗೌಡ ಬೀಚನಹಳ್ಳಿ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಅಗ್ರಹಾರ ಕೃಷ್ಣಮೂರ್ತಿ, ವಸುಂಧರಾ ಭೂಪತಿ, ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ಕಸಾಪದ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಮೂರ್ತಿ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಮುಖ್ಯಸ್ಥ ಕವಿರಾಜ್ ಹಾಗೂ ಬನವಾಸಿ ಬಳಗದ ಅಧ್ಯಕ್ಷ ಜಿ.ಆನಂದ್ ಸೇರಿ ಇತರರು ಇದ್ದರು.


